ಕಣಿವೆ, ಮಾ. ೨೫ : ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮದಲ್ಲಿ ನಿರ್ಮಿಸುತ್ತಿರುವ ನೂತನ ತೂಗುಸೇತುವೆ ಕಾಮಗಾರಿ ಇನ್ನು ಹತ್ತು ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಈಗಾಗಲೇ ತೂಗುಸೇತುವೆಯ ಎರಡೂ ಬದಿಯ ರೈಲಿಂಗ್ಸ್ ಹಾಗೂ ಪಾದಚಾರಿ ಮಾರ್ಗದ ಕಬ್ಬಿಣದ ಹಲಗೆಗಳ ಜೋಡಣೆ ಕಾಮಗಾರಿ ಭರದಿಂದ ಸಾಗಿದೆ.

ನೂತನ ತೂಗುಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ನಿಸರ್ಗಧಾಮದೊಳಗೆ ಪ್ರವಾಸಿಗರು ಸಂಚರಿಸಲು ನದಿಯ ಅನತಿ ದೂರದಲ್ಲಿ ಮರದಿಂದ ನಿರ್ಮಿತ ತಾತ್ಕಾಲಿಕ ತೂಗುಸೇತುವೆಯನ್ನು ನಿರ್ಮಿಸಲಾಗಿತ್ತು. ಇದರ ಮೇಲೆಯೇ ಕಳೆದ ಮೂರು ತಿಂಗಳಿAದ ಪ್ರವಾಸಿಗರು ಒಳತೆರಳಿ ನಿಸರ್ಗ ನಿರ್ಮಿತ ಉದ್ಯಾನವನ್ನು ಕಣ್ತುಂಬಿಕೊAಡು ಮರಳುತ್ತಿದ್ದರು.

ಇನ್ನೇನು ಮಳೆಗಾಲ ಆರಂಭವಾಗುವ ಮುಂಗಾರು ಸಮಯ ಸನ್ನಿಹಿತವಾಗುತ್ತಿದ್ದಂತೆಯೇ ತೂಗುಸೇತುವೆ ನಿರ್ಮಾಣ ಕಾಮಗಾರಿಯೂ ವೇಗ ಪಡೆದುಕೊಂಡಿದೆ. ತೂಗುಸೇತುವೆಗಳ ನಿರ್ಮಾತೃ ಎಂದೇ ಜನಜನಿತರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಳ್ಯದ ಗಿರೀಶ್ ಭಾರದ್ವಾಜ್ ಅವರ ಪುತ್ರ ಪತಂಜಲಿ ಭಾರದ್ವಾಜ್ ಅವರು ನೂತನ ತೂಗು ಸೇತುವೆಯ ಉಸ್ತುವಾರಿ ವಹಿಸಿದ್ದು ಹತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ತೂಗುಸೇತುವೆಯ ಪ್ರಧಾನ ಶಕ್ತಿಯಾಗಿರುವ ಬೃಹತ್ ಗಟ್ಟಿಮುಟ್ಟಾದ ೧೫೦ ಮೀಟರ್ ಕೇಬಲ್‌ಅನ್ನು ಕೊರಿಯಾದಿಂದ ತರಿಸಿಕೊಳ್ಳಲಾಗಿದೆ. ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಪತಂಜಲಿ ಭಾರದ್ವಾಜ್ ‘ಶಕ್ತಿ’ಗೆ ತಿಳಿಸಿದರು.

ಶಿಥಿಲಗೊಂಡಿದ್ದ ಹಳೆಯ ತೂಗುಸೇತುವೆಯನ್ನು ತೆರವು ಗೊಳಿಸಿದ ಬಳಿಕ ನಿಸರ್ಗಧಾಮಕ್ಕೆ ಹರಿದು ಬರುವ ದೂರದ ಊರುಗಳ ಪ್ರವಾಸಿಗರಿಗೆ ನಿರಾಶೆಗೊಳಿಸದಂತೆ ತಾತ್ಕಾಲಿಕವಾಗಿ ನಿರ್ಮಿಸಿರುವ ಮರದಿಂದ ನಿರ್ಮಿತ ತೂಗು ಸೇತುವೆಯ ಮೇಲೆ ಕಲ್ಪಿಸಿರುವ ಸಂಪರ್ಕ ಬಹುತೇಕ ಏಪ್ರಿಲ್ ಎರಡನೇ ವಾರದವರೆಗೂ ಮುಂದುವರೆಯಲಿದ್ದು, ಹೊಸ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡು ಉದ್ಘಾಟನೆಯಾದ ಬಳಿಕ ಪ್ರವಾಸಿಗರ ಮುಕ್ತ ಸಂಚಾರಕ್ಕೆ ಬಿಡುವ ಬಗ್ಗೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ನಿಸರ್ಗಧಾಮದ ಮೇಲ್ವಿಚಾರಕ ಉಪವಲಯ ಅರಣ್ಯಾಧಿಕಾರಿ ವಿಲಾಸ್ ‘ಶಕ್ತಿ'ಗೆ ಮಾಹಿತಿ ನೀಡಿದರು.

(ವರದಿ : ಕೆ.ಎಸ್. ಮೂರ್ತಿ)