ಮಡಿಕೇರಿ, ಮಾ. ೨೫: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಿರುವುದನ್ನು ವಿರೋಧಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಐಜಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ದೇಶದಲ್ಲಿ ಬಿಜೆಪಿ ಅರಾಜಕತೆ ಸೃಷ್ಟಿಸಿದೆ. ವಿರೋಧ ಪಕ್ಷವನ್ನು ಬಗ್ಗುಬಡಿಯುವ ನೀತಿ ಅನುಸರಿಸ ಲಾಗುತ್ತಿದೆ. ಅಧಿಕಾರ ದರ್ಪದಿಂದ ಎಲ್ಲಾ ಕ್ಷೇತ್ರಗಳನ್ನು ತನ್ನ ಹಿಡಿತದಲ್ಲಿಟ್ಟು ಕೊಳ್ಳಲು ಮುಂದಾಗಿರುವ ಬಿಜೆಪಿ ಸರಕಾರ, ವಿರೋಧ ಪಕ್ಷದ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಭಾರತ್ ಜೋಡೋ ಯಾತ್ರೆ ಮೂಲಕ ದೇಶದ ಉದ್ದಗಲಕ್ಕೆ ಸಂಚರಿಸಿ ಜನಪ್ರಿಯತೆ ಪಡೆದು ಕೊಂಡಿರುವ ರಾಹುಲ್ ಗಾಂಧಿ ಅವರ ಏಳಿಗೆಯನ್ನು ಸಹಿಸದ ಬಿಜೆಪಿ, ಅವರನ್ನು ತುಳಿಯುವ ಯತ್ನಕ್ಕೆ ಮುಂದಾಗಿದೆ. ರಾಹುಲ್ ಗಾಂಧಿಯವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಸಮಯವೂ ಇದೆ. ಹೀಗಿರುವಾಗ ವಿರೋಧ ಪಕ್ಷದ ನಾಯಕನೆಂದೂ ನೋಡದೆ ಅವರ ಸದಸ್ಯತ್ವ ರದ್ದುಗೊಳಿಸುವ ಮೂಲಕ ಧಮನಕಾರಿ ನೀತಿ ಅನುಸರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಮುಖಂಡ ಎಚ್.ಎಸ್ ಚಂದ್ರಮೌಳಿ ಮಾತನಾಡಿ, ಕಾಂಗ್ರೆಸ್ ನ್ಯಾಯಾಂಗದ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿಲ್ಲ. ಬದಲಾಗಿ ನ್ಯಾಯಾಂಗ ವ್ಯವಸ್ಥೆಯನ್ನು ಕೇಂದ್ರ ಸರಕಾರ ಬಳಸಿಕೊಂಡ ರೀತಿಯನ್ನು ವಿರೋಧಿಸುತ್ತಿದೆ. ರಾಹುಲ್ ಗಾಂಧಿ ಮಾತನಾಡಿದ ಸಂದರ್ಭ ಮತ್ತು ಉದ್ದೇಶವನ್ನು ಪರಾಮರ್ಶಿಸದೆ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ. ಅಲ್ಲದೆ ತೀರ್ಪು ಬಂದ ಕೂಡಲೇ ಅವರನ್ನು ಅನರ್ಹಗೊಳಿಸುವ ಮೂಲಕ ಅವರನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಕೇಂದ್ರ ಸರಕಾರ ಮೋಸ ಮಾಡಿದೆ ಎಂದರು.

ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ಇದು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಪ್ರಜಾ ಪ್ರಭುತ್ವದ ಮೇಲೆ ನಡೆದ ಗದಾ ಪ್ರಹಾರವಾಗಿದೆ. ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆಗೆ ಮುಂದಾಗಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ ರಮೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ ರಾಜೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಲ್ಪಸAಖ್ಯಾತರಿಗೆ ಅನ್ಯಾಯ

ಅಲ್ಪಸಂಖ್ಯಾತರಿಗಿದ್ದ ಮೀಸಲಾತಿಯನ್ನು ರದ್ದುಗೊಳಿಸುವ ಮೂಲಕ ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅಲ್ಪಸಂಖ್ಯಾತರಿಗಿದ್ದ ಮೀಸಲಾತಿಯನ್ನು ರದ್ದು ಮಾಡುವ ಮೂಲಕ ಸರ್ಕಾರ ಅಲ್ಪಸಂಖ್ಯಾತರ ಹಕ್ಕನ್ನು ಕಸಿದುಕೊಂಡಿದೆ ಎಂದು ದೂರಿದರು.ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕೆAದು ಒತ್ತಾಯಿಸಿದರು.

ಇದೇ ಸಂದರ್ಭ ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಯೋಜಕರಾಗಿದ್ದ ಕೋಳಿಬೈಲು ವೆಂಕಟೇಶ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ರಮಾನಾಥ್ ,ಡಿಸಿಸಿ ಸದಸ್ಯ ಸುನಿಲ್ ಪತ್ರಾವೊ,ನಾಪೊಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಭಾಗಮಂಡಲ ವಲಯ ಅಧ್ಯಕ್ಷ ದೇವಂಗೋಡಿ ಹರ್ಷ ಉಪಸ್ಥಿತರಿದ್ದರು.