ಮಡಿಕೇರಿ, ಮಾ. ೨೫: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಕಾಂಕ್ಷ್ಷೆ ಹೊಂದಿದ್ದ ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಅವರಿಗೆ ಇದೀಗ ಟಿಕೆಟ್ ಕೈತಪ್ಪಿದೆ.

ಕಳೆದ ೪ ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನಂದಕುಮಾರ್ ಅವರು ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿದ್ದರು. ಆದರೆ, ಕೊನೆಘಳಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜಿ. ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಸಹಜವಾಗಿಯೇ ಬೇಸರಗೊಂಡಿರುವ ನಂದಕುಮಾರ್ ಮುಂದಿನ ನಡೆಯ ತೀರ್ಮಾನವನ್ನು ತಮ್ಮ ಬೆಂಬಲಿಗರಿಗೆ ಬಿಟ್ಟಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯಿಸಿದ ಅವರು, ಕಳೆದ ೪ ವರ್ಷಗಳಿಂದ ತಳಮಟ್ಟದಿಂದ ಸುಳ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೆ. ಈ ಬಾರಿ ಗೆಲ್ಲುವ ವಾತಾವರಣವೂ ಇತ್ತು. ಸುಳ್ಯದ ಜನ ಕೂಡ ಬೆಂಬಲ ನೀಡುತ್ತಿದ್ದರು. ತನಗೆ ಟಿಕೆಟ್ ನೀಡಿದ್ದರೆ ಪಕ್ಷಕ್ಕೂ ಪೂರಕವಾಗುತಿತ್ತು. ಇದೀಗ ಟಿಕೆಟ್ ನೀಡದಿರುವುದು ಆಶ್ಚರ್ಯ ತರಿಸಿದೆ. ಟಿಕೆಟ್ ಕೈತಪ್ಪಿದ ಬಗ್ಗೆ ಬೆಂಬಲಿಗರಲ್ಲಿ ಬೇಸರ ಇದೆ. ಈ ನಿಟ್ಟಿನಲ್ಲಿ ತಾ. ೨೬ ರಂದು (ಇಂದು) ಸುಳ್ಯ ಹಾಗೂ ಕಡಬದಲ್ಲಿ ಬೆಂಬಲಿಗರು ತನ್ನನ್ನು ಆಹ್ವಾನಿಸಿದ್ದಾರೆ. ಅಲ್ಲಿಗೆ ತೆರಳಿ ಬೆಂಬಲಿಗರ ಸಲಹೆ ಪಡೆದು ಮುನ್ನಡೆಯಲಾಗುವುದು. ಜಾತ್ಯತೀತ ಜನತಾದಳದ ಸ್ಥಳೀಯರ ಮುಖಂಡರು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ.