ನಾಪೋಕ್ಲು, ಮಾ. ೨೫: ನಾಪೋಕ್ಲುವಿನಿಂದ ವೀರಾಜಪೇಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಕೊಳಕೇರಿಯಲ್ಲಿ ರಸ್ತೆತಡೆ ನಡೆಸಿ ಶನಿವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೋಕೇರಿ ಮತ್ತು ಕೊಳಕೇರಿ ಗ್ರಾಮದ ರಸ್ತೆಯು ಎರಡು ದಶಕಗಳಿಂದ ದುರಸ್ತಿ ಕಾಣದೆ ಸಂಚಾರ ದುಸ್ತರವಾಗಿದೆ. ರಸ್ತೆ ದುರಸ್ತಿಯ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿ ಸಂಬAಧಪಟ್ಟ ಅಧಿಕಾರಿಗಳ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿರುವ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವೀರಾಜಪೇಟೆ ಕಡೆಯಿಂದ ನಾಪೋಕ್ಲುವಿಗೆ ಬರುವ ಬಸ್ಸು, ಇನ್ನಿತರ ವಾಹನಗಳನ್ನು ತಡೆದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಭಿಯಂತರರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಶೀಘ್ರ ರಸ್ತೆ ದುರಸ್ತಿಪಡಿಸದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಗ್ರಾಮಸ್ಥ ಚೇನಂಡ ಗಿರೀಶ್ ಮಾತನಾಡಿ, ೬ ಕಿ.ಮೀ. ಉದ್ದದ ರಸ್ತೆ ಕಳೆದ ೨೦ ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹೋಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಭರವಸೆ ನೀಡುತ್ತಾರೆ ಹೊರತು ದುರಸ್ತಿಪಡಿಸಲು ಕ್ರಮಕೈಗೊಂಡಿಲ್ಲ ಹಾಗಾಗಿ ಈ ಬಾರಿಯ ಚುನಾವಣೆ ಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಒಗ್ಗಟ್ಟಾಗಿ ನಿರ್ಧರಿಸಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ವೈ ಅಶ್ರಫ್, ಮಾಜಿ ಸದಸ್ಯ ಕೆ.ಎ. ಹ್ಯಾರಿಸ್, ಅಬ್ದುಲ್ ರಜಾಕ್, ಗ್ರಾಮಸ್ಥರಾದ ಕೆ.ಎ. ಅಶ್ರಫ್, ಮಹಮದ್ ಚೆರ್ಮಾನಿ, ಕೆ.ಎ. ಮೊಯ್ದು, ಕೆ.ಎ. ಜುಬೇರ್, ಮೊಹಮದ್ ಮುಸ್ಲಿಯಾರ್, ಚೇನಂಡ ನಂದ, ಚೇನಂಡ ಕಾರ್ಯಪ್ಪ, ಚೇನಂಡ ಬೋಪಣ್ಣ, ಚೇನಂಡ ಸಂಪತ್, ಪೊನ್ನಚಂಡ ಅರುಣ್, ಪೊನ್ನಚಂಡ ಮನೋಹರ್, ಪೊನ್ನಚಂಡ ಸನ್ನಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಜವರೇಗೌಡ ಮಾತನಾಡಿ ರೂ. ೫ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಸಂಪೂರ್ಣ ರಸ್ತೆಯನ್ನು ದುರಸ್ತಿಪಡಿಸಬೇಕು ತಪ್ಪಿದಲ್ಲಿ ಚುನಾವಣೆ ಬಹಿಷ್ಕರಿಸುವು ದಾಗಿ ಹೇಳಿದರು. ನಾಪೋಕ್ಲು ಠಾಣಾಧಿಕಾರಿ ಇ. ಮಂಜುನಾಥ್, ಎಎಸ್‌ಐ ಗೋಪಾಲಕೃಷ್ಣ, ಮಧುಸೂದನ್, ಸಂಪತ್ ರಾಜ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದರು.