*ಗೋಣಿಕೊಪ್ಪ, ಮಾ. ೨೫: ಸಮುದಾಯದ ಉಳಿವಿಗೆ ಆಚರಣೆ ಸಹಕಾರಿ ಎಂದು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಸಂಸ್ಥಾಪಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಹೇಳಿದರು. ಬುಧವಾರ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ‘ನಮ್ಮ ದೇಶ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಡಿ ಪೊನ್ನಂಪೇಟೆ ಕೃಷ್ಣನಗರದಲ್ಲಿರುವ ಕನ್ನಂಬಾಡಿಯಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಯುಗಾದಿ ಆಚರಣೆಯಲ್ಲಿ ಮಾತನಾಡಿ, ಹಿಂದೂ ಆಚರಣೆಯಲ್ಲಿ ಹಬ್ಬಗಳು ತನ್ನದೇ ಆದ ಹಿನ್ನೆಲೆ ಹೊಂದಿವೆೆ. ಆಚರಣೆ ಒಂದು ಸಮುದಾಯದ ಸಂಸ್ಕೃತಿ, ಆಚಾರ-ವಿಚಾರವನ್ನು ಸಂರಕ್ಷಿಸುತ್ತಿದೆ. ಇದರಿಂದಾಗಿ ಆಚರಣೆಯಲ್ಲಿ ನಿರ್ಲಕ್ಷö್ಯ ತೋರಿದರೆ ಸಮುದಾಯದ ಅಳಿವಿಗೂ ಕಾರಣವಾಗಬಹುದು. ಹೊಸ ಯುಗದ ಆರಂಭ ಎಂಬ ಅರ್ಥದಲ್ಲಿರುವ ಯುಗಾದಿ ನವಚೈತನ್ಯ ತರುತ್ತದೆ. ದಕ್ಷಿಣ ಭಾರತದ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ರಾಜ್ಯದಲ್ಲಿ ಯುಗಾದಿ ಆಚರಿಸಲಾಗುತ್ತದೆ. ಹಬ್ಬವು ಬ್ರಹ್ಮ ದೇವ ಭೂಮಿಯನ್ನು ಸೃಷ್ಠಿಸಿದ ಕಾಲ ಎಂಬ ನಂಬಿಕೆ ಇದೆ. ಪ್ರಕೃತಿಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಪರಬ್ರಹ್ಮನನ್ನು ಪೂಜಿಸಲು ಸುಸಂದರ್ಭ ಎಂದು ಅವರು ಹೇಳಿದರು. ಕೃಷ್ಣನಗರದ ಹಿರಿಯರಾದ ದಿನೇಶ್ ಮಾತನಾಡಿ, ಹಬ್ಬದ ಮೂಲಕ ನಮ್ಮ ಆಚರಣೆಗಳನ್ನು ನಡೆಸಲು ಅವಕಾಶ ದೊರೆತಿದೆ. ಎಲ್ಲರೂ ಸೇರಿ ವಿಶೇಷ ಪೂಜೆ, ಆಚಾರ-ವಿಚಾರಗಳನ್ನು ನಡೆಸಲಾಗುತ್ತಿದೆ ಎಂದರು. ಸ್ಥಳೀಯ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕನ್ನಂಬಾಡಿಯಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ರವಿ, ಗೌರವ ಅಧ್ಯಕ್ಷ ಹೆಚ್.ಕೆ. ಗೋಪಾಲ್, ಉಪಾಧ್ಯಕ್ಷ ರವಿದಾಸ್, ಕಾರ್ಯದರ್ಶಿ ಹೆಚ್.ಕೆ. ವೆಂಕಟೇಶ್, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯಕ್ರಮ ಸಂಚಾಲಕ ವಿ.ವಿ. ಅರುಣ್‌ಕುಮಾರ್, ನಿರ್ದೇಶಕರಾದ ಕೆ.ಬಿ. ಜಗದೀಶ್ ಜೋಡುಬೀಟಿ, ಎಂ.ಎA. ಚನ್ನನಾಯಕ ಇದ್ದರು.