ಕುಶಾಲನಗರ, ಮಾ. ೨೫: ಕುಶಾಲನಗರ ಪುರಸಭೆಯ ವಾಣಿಜ್ಯ ಸಂಕೀರ್ಣದ ಪ್ರಥಮ ಹಂತದ ಕಾಮಗಾರಿ ೨.೮ ಕೋಟಿ.ರೂ ವೆಚ್ಚದಲ್ಲಿ ನಡೆದಿದ್ದು ಸದ್ಯದಲ್ಲಿಯೇ ಟೆಂಡರ್ ಮೂಲಕ ಅಂಗಡಿ ಮಳಿಗೆಗಳನ್ನು ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಅವರು ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆ ಮತ್ತು ಪುರಸಭೆಯ ನೂತನ ಟ್ರಾö್ಯಕ್ಟರ್ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪುರಸಭೆಯಾಗಿ ಮೇಲ್ದರ್ಜೆಗೇರಿದ ಪಟ್ಟಣದ ಹಾಗೂ ನೆರೆಯ ಗ್ರಾಮಗಳ ಅಭಿವೃದ್ಧಿಗೆ ಸರಕಾರದ ಹೆಚ್ಚಿನ ಅನುದಾನದ ಅಗತ್ಯತೆಯಿದೆ ಎಂದ ಅವರು, ಕುಶಾಲನಗರದ ಪುರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಪಟ್ಟಣದ ಅಭಿವೃದ್ಧಿ ನಿಟ್ಟಿನಲ್ಲಿ ಉತ್ತಮ ಕೆಲಸ ನಿರ್ವಹಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಪುರಸಭೆ ಅಧ್ಯಕ್ಷರಾದ ಜಯವರ್ಧನ್, ಕುಶಾಲನಗರ ಪುರಸಭೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಮೂಲಕ ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆ ರೂಪಿಸಲಾಗುವುದು. ಈ ಸಾಲಿನ ಅಭಿವೃದ್ಧಿಗೆ ಮತ್ತು ಮೂಲಭೂತ ಸೌಕರ್ಯಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ತರಾತುರಿಯಲ್ಲಿ ಪುರಸಭೆಯ ವಾಣಿಜ್ಯ ಸಂಕೀರ್ಣ ಉದ್ಘಾಟನೆಗೊಳಿಸಿರುವ ಬಗ್ಗೆ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಸ್ಯರಾದ ಪ್ರಮೋದ್ ಮುತ್ತಪ್ಪ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಪೂರ್ಣಗೊಂಡಿರುವ ಅಂಗಡಿ ಮಳಿಗೆ ಕಟ್ಟಡವನ್ನು ಚುನಾವಣೆ ಹತ್ತಿರ ಬಂದ ಸಂದರ್ಭ ಉದ್ಘಾಟನೆ ಹೆಸರಲ್ಲಿ ರಾಜಕಾರಣ ಮಾಡಿರುವುದು ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮಕ್ಕೆ ಪುರಸಭೆಯ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೈರು ಹಾಜರಾಗಿದ್ದು ಕಂಡು ಬಂತು. ಈ ಸಂದರ್ಭ ಉಪಾಧ್ಯಕ್ಷೆ ಸುರಯ್ಯ ಬಾನು, ಮುಖ್ಯಾಧಿಕಾರಿ ನಾಯಕ್, ಪುರಸಭೆಯ ಸಲಹೆಗಾರ ಆರ್.ಕೆ. ನಾಗೇಂದ್ರ ಬಾಬು ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್ ಸದಸ್ಯರು ಮತ್ತಿತರರು ಇದ್ದರು.

ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಂಜನ್, ಹಾರಂಗಿ ಜಲಾಶಯದ ಹೂಳೆತ್ತುವುದು ಮತ್ತು ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದು ನಾಲೆಗಳ ಅಭಿವೃದ್ದಿಗಾಗಿ ಒಟ್ಟು ರೂ. ೧೮೪ ಕೋಟಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಕುಶಾಲನಗರ ಪಟ್ಟಣದ ಮುಳುಗಡೆಯಾಗುವ ಬಡಾವಣೆಗಳನ್ನು ಅತ್ಯಾದುನಿಕ ತಂತ್ರಜ್ಞಾನದೊAದಿಗೆ ಪ್ರವಾಹ ಮುಕ್ತ ಮಾಡಲು ಒಟ್ಟು ರೂ. ೧೨ ಕೋಟಿ ಬಿಡುಗಡೆಯಾಗಿದೆ. ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆ ನಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.