ರಾಮಪುರದ ವರ್ತಕ ರಾಮಣ್ಣನಿಗೆ ರಮೇಶ್ ಎನ್ನುವ ಒಬ್ಬನೇ ಮಗನಿದ್ದನು. ಏಕೈಕ ಪುತ್ರ ಎನ್ನುವ ಕಾರಣದಿಂದ ರಾಮಣ್ಣನು ಮಗನಿಗೆ ಬೇಕಾದುದೆಲ್ಲವನ್ನೂ ಸ್ವಲ್ಪವೂ ಹಿಂದು ಮುಂದಾಲೋಚಿಸದೆ ತೆಗೆದುಕೊಡುತ್ತಿದ್ದನು. ಮಗನು ಚೆನ್ನಾಗಿ ಓದಿ ಕಲಿತು ಮುಂದೆ ಒಳ್ಳೆಯ ಉದ್ಯೋಗಕ್ಕೆ ಸೇರಿ ಹಣವನ್ನು ಸಂಪಾದಿಸಬೇಕು ಎನ್ನುವುದು ರಾಮಣ್ಣನ ಬಯಕೆ ಯಾಗಿತ್ತು. ತನಗೆ ಬೇಕಾದುದೆಲ್ಲ ವನ್ನೂ ಅಪ್ಪನು ತೆಗೆದು ಕೊಡುವಾಗ ತಾನಾದರೂ ಏಕೆ ಕಷ್ಟ ಪಟ್ಟು ಓದಿ ಹಣವನ್ನು ಸಂಪಾದಿಸಬೇಕು ಎನ್ನುವುದು ರಮೇಶನ ಬಾಲಿಶ ಅಭಿಪ್ರಾಯ ವಾಗಿತ್ತು. ಅಲ್ಲದೆ ಮದುವೆ ಮುಂಜಿಗಳಿಗೆ ಅಪ್ಪನ ಜೊತೆಯಲ್ಲಿ ಹೋಗುವಾಗ ಊಟದ ಸಮಯದಲ್ಲಿ ಅಗತ್ಯ ಕ್ಕಿಂತಲೂ ಹೆಚ್ಚಿಗೆ ಊಟ ತಟ್ಟೆಗೆ ಬಡಿಸಿಕೊಂಡು ಅವನ್ನು ತಿನ್ನದೆ ಹಾಗೆಯೇ ತಟ್ಟೆಯಲ್ಲಿ ಅನ್ನವನ್ನು ಬಿಟ್ಟು ಬಿಡುತ್ತಿದ್ದನು.
ಅನ್ನವೆನ್ನುವುದು ದೇವರು, ಅದನ್ನೆಂದಿಗೂ ವ್ಯರ್ಥಮಾಡ ಬಾರದು, ಅನ್ನವಿಲ್ಲದೆ ಹಸಿವೆಯಿಂದ ಎಷ್ಟೋ ಜನರು ಬಳಲುತ್ತಿದ್ದಾರೆ ಎಂದು ಎಷ್ಟು ತಿಳಿ ಹೇಳಿದರೂ ಅವನು ಕೇಳುತ್ತಿರಲಿಲ್ಲ. ಮದುವೆ ಮನೆಗಳಲ್ಲಿ ಎಷ್ಟೊಂದು ಅನ್ನವನ್ನು ಮಾಡಿ ಬಡಿಸುತ್ತಾರೆ, ಅದರಲ್ಲಿ ನಾನು ಸ್ವಲ್ಪ ವ್ಯರ್ಥ ಮಾಡಿದರೆ ಏನೂ ನಷ್ಟವಾಗದು ಎನ್ನುವುದು ಅವನ ವಾದ ವಾಗಿತ್ತು.
ಇವನ ಈ ದೃಷ್ಟಿಕೋನ ವನ್ನು ಬದಲಿಸಲು ಅವನ ತಂದೆ ರಾಮಣ್ಣನು ಒಂದು ಉಪಾಯ ವನ್ನು ಹೂಡಿದನು. ಒಂದು ದಿವಸ ತನಗೂ ತನ್ನ ಮಗ ರಮೇಶನಿಗೂ ಎರಡು ಬುತ್ತಿ ಗಳಲ್ಲಿ ಅನ್ನವನ್ನು ಕಟ್ಟಿಕೊಂಡು ದೂರದ ಊರಿನ ಮದುವೆ ಯೊಂದಕ್ಕೆ ಹೊರಟನು. ಸ್ವಲ್ಪ ದೂರ ನಡೆದಾಗ ಅವರಿಗೆ ಹಸಿವೆಯಾಯಿತು. ರಾಮಣ್ಣನು ಬುತ್ತಿಯಲ್ಲಿರುವ ಅನ್ನದಲ್ಲಿ ಸ್ವಲ್ಪವನ್ನು ತಿಂದು ಉಳಿದುದನ್ನು ಕಟ್ಟಿ ಚೀಲದೊಳಗೆ ಇರಿಸಿದನು. ಆದರೆ ರಮೇಶನು ತನ್ನ ಬುತ್ತಿಯ ಅನ್ನದಲ್ಲಿ ಸ್ವಲ್ಪವನ್ನು ತಿಂದು ಉಳಿದುದನ್ನು ಅಲ್ಲಿಯೇ ಎಸೆದು ಬಿಟ್ಟನು. ಅನಂತರ ಅವರು ಪ್ರಯಾಣವನ್ನು ಮುಂದುವರೆಸಿದರು. ಆಗ ರಾಮಣ್ಣನು ಮಗನೊಂದಿಗೆ “ನೀನು ಇಲ್ಲಿಯೆ ಇರು, ನಾನು ಕೆಲಸದ ಕಾರಣ ಮತ್ತೆ ಊರಿಗೆ ಹೋಗಿ ಬೇಗ ಮರಳಿ ಬರುತ್ತೇನೆ’’ ಎಂದು ಮಗ ರಮೇಶನನ್ನು ಒಂದು ಮರದ ಬುಡದಲ್ಲಿ ಕೂರಿಸಿ ತನ್ನ ಚೀಲದೊಂದಿಗೆ ತಾನು ಸ್ವಲ್ಪ ದೂರ ಹಿಂದೆ ನಡೆದು ಒಂದು ಮರದ ತುದಿಯಲ್ಲಿ ಕುಳಿತು ಮಗನು ಏನು ಮಾಡುತ್ತಿದ್ದಾನೆ ಎಂಬುದನ್ನು ಗಮನಿಸುತ್ತಿದ್ದನು.
ಸ್ವಲ್ಪ ಹೊತ್ತಿಗೆ ಕತ್ತಲಾವರಿಸ ತೊಡಗಿತು. ಊರಿಗೆ ಹೋದ ಅಪ್ಪ ಇನ್ನೂ ಮರಳಿ ಬರಲಿಲ್ಲವಲ್ಲ ಎಂದು ರಮೇಶನು ಚಡಪಡಿಸ ತೊಡಗಿದನು. ಅವನಿಗೆ ಈಗ ಹಸಿವೆಯಾಗತೊಡಗಿತು. ಊಟ ಮಾಡೋಣವೆಂದರೆ ಅಪ್ಪನಲ್ಲಿ ಉಳಿದಿದ್ದ ಬುತ್ತಿಯನ್ನು ಅಪ್ಪನು ಎತ್ತಿಕೊಂಡು ಹೋಗಿದ್ದಾನೆ. ತನ್ನ ಬಳಿಯಿರುವ ಬುತ್ತಿಯೂ ಖಾಲಿ ಯಾಗಿದೆ. ಈಗ ತಾನೇನು ಮಾಡಲಿ ? ತನ್ನ ಕಿಸೆಯಲ್ಲಿ ಇರುವ ಹಣದಿಂದ ಅಥವಾ ಬೆರಳಿನಲ್ಲಿರುವ ಚಿನ್ನದ ಉಂಗುರ ವನ್ನು ಮಾರಿ ಬರುವ ಹಣದಿಂದ ಅನ್ನವನ್ನು ಕೊಳ್ಳೋಣ ಎಂದರೆ ಆಹಾರ ಮಾರುವವರು ಯಾರೂ ಆ ಸಮಯದಲ್ಲಿ ಅವನಿಗೆ ಕಾಣಲಿಲ್ಲ.
ಹೊತ್ತು ಸರಿಯುತ್ತಿದ್ದಂತೆ ಅವನ ಹಸಿವಿನ ಬಾಧೆಯು ಹೆಚ್ಚಾಗತೊಡಗಿ ಅವನು ಅಳ ತೊಡಗಿದನು. ಅವನಿಗೆ ಆಗ ಅಪರಾಹ್ನ ತನ್ನ ಬುತ್ತಿಯಲ್ಲಿ ಉಳಿದಿದ್ದ ಅನ್ನವನ್ನು ತಾನು ಚೆಲ್ಲಿದ ಜಾಗವು ನೆನಪಿಗೆ ಬಂತು. ಅವನು ಲಗುಬಗೆಯಿಂದ ಅನ್ನ ಚೆಲ್ಲಿದ ಜಾಗದತ್ತ ಹೋದಾಗ ಅಲ್ಲಿದ್ದ ಇರುವೆಗಳು ಆ ಅನ್ನದ ಬಹುಭಾಗವನ್ನು ಹೊತ್ತುಕೊಂಡು ಹೋಗುತ್ತಿರು ವುದು ಅವನ ಗಮನಕ್ಕೆ ಬಂತು. ಅವನು ಆಗ ಒಂದು ಕೋಲಿ ನಿಂದ ಅ ಇರುವೆಗಳನ್ನು ಓಡಿಸಿ ಅಲ್ಲಿ ನೆಲದ ಮೆಲೆ ಬಿದ್ದಿದ್ದ, ಇರುವೆಗಳು ಅರ್ಧ ತಿಂದಿದ್ದ ಅನ್ನದ ಅಗುಳುಗಳನ್ನು ಹೆಕ್ಕಿ ಕೊಂಡು ತಿನ್ನತೊಡಗಿದನು. ಆದರೂ ಅವನ ಹಸಿವೆಯು ಕಡಿಮೆಯಾಗಲಿಲ್ಲ. ಕೊನೆಗೆ ಅವನು ಇರುವೆಗಳು ಕಚ್ಚಿಕೊಂಡಿ ರುವ ಅನ್ನದ ಅಗುಳನ್ನೂ ಕಿತ್ತುಕೊಂಡು ತಿನ್ನತೊಡಗಿದನು. ಆಗ ಅವನಿಗೆ ಅನ್ನದ ಬೆಲೆಯು ಅರ್ಥವಾಗತೊಡಗಿತು. ತನ್ನ ಬಳಿ ಇರುವ ಧನ, ಕನಕಗಳಾವುದೂ ಅನ್ನದ ಬೆಲೆಗೆ ಸಮವಲ್ಲ ವೆಂಬುದು ತಿಳಿಯಿತು.
ಇದನ್ನೆಲ್ಲ ನೋಡುತ್ತಿದ್ದ ರಾಮಣ್ಣನು ಮೆಲ್ಲನೆ ಮರ ದಿಂದಿಳಿದು ಅಲ್ಲಿಗೆ ಬಂದಾಗ ಅಪ್ಪನನ್ನೇ ಕಾಯುತ್ತಿದ್ದ ರಮೇಶನು ಅಪ್ಪನ ಚೀಲದಲ್ಲಿ ಉಳಿದಿದ್ದ ಅನ್ನವನ್ನು ಕಸಿದು ಕೊಂಡು ತಿಂದು ಮುಗಿಸಿದನು. ಆಗ ರಾಮಣ್ಣನು ಮಗನೊಂದಿಗೆ
“ಮಗ ರಮೇಶ, ಈಗ ನಿನಗೆ ಅನ್ನದ ಬೆಲೆ ತಿಳಿದಿರ ಬಹುದು. ಹಸಿವಾದಾಗ ಅನ್ನದ ಮುಂದೆ ಮತ್ಯಾವುದೂ ಇಲ್ಲ. ನೀನು ಈ ಹಿಂದೆ ಎಷ್ಟೊಂದು ಅನ್ನವನ್ನು ಮದುವೆ ಮನೆಗಳಲ್ಲಿ ಹಾಳು ಮಾಡುತ್ತಿದ್ದೆ. ಅದೇ ಅನ್ನವು ಎಷ್ಟೋ ಹಸಿದವರ ಹೊಟ್ಟೆಗೆ ಅಮೃತಪ್ರಾಯವೂ ಆಗಬಹುದು ಎಂಬದು ಈಗ ನಿನಗೆ ಗೊತ್ತಾಯಿತೇ?” ಎಂದು ಕೇಳಿದನು.
ಆಗ ರಮೇಶನು “ಹೌದು ಅಪ್ಪ, ನನ್ನದು ಬಹಳ ತಪ್ಪಾಯಿತು. ನಾನಿನ್ನು ಮುಂದೆ ಎಂದಿಗೂ ಅನ್ನವನ್ನು ಪೋಲು ಮಾಡುವುದಿಲ್ಲ” ಎಂಬ ಮಾತನ್ನು ಅಪ್ಪನಿಗೆ ಕೊಟ್ಟನು.
ಅಂದಿನಿAದ ರಮೇಶನು ಯಾವುದೇ ಮದುವೆ ಮನೆಗಳಿಗೆ ಹೋದರೂ ಅಥವಾ ತನ್ನ ಮನೆಯಲ್ಲಿಯೇ ಆದರೂ ಊಟಕ್ಕೆ ಕುಳಿತಾಗ ಆ ರಾತ್ರಿಯ ಸನ್ನಿವೇಶವು ನೆನಪಾ ಗುತ್ತದೆ. ಆಗ ಅವನು ತನಗೆ ಅಗತ್ಯವಿರುವ ಅನ್ನಕ್ಕಿಂತಲೂ ತುಸು ಕಡಿಮೆಯಷ್ಟೇ ಅನ್ನವನ್ನು ಬಡಿಸಿಕೊಂಡು ಒಂದು ಅಗುಳು ಸಹ ಪೋಲಾಗದಂತೆ ತಿನ್ನುವ ಕ್ರಮವನ್ನು ಅನುಸರಿಸುತ್ತಿದ್ದಾನೆ. ಅನ್ನ ದೇವರ ಮುಂದೆ ಇನ್ನು ಯಾವ ದೇವರು ಇಲ್ಲ ಎನ್ನುವ ನಾಣ್ನುಡಿಯು ಅವನಿಗೆ ಈಗ ಅರ್ಥವಾಗಿದೆ.