ಮಡಿಕೇರಿ, ಮಾ. ೨೩: ವೀರಾಜಪೇಟೆ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರಗಳಿಗೆ ಎರಡು ಅತ್ಯಾಧುನಿಕ ತುರ್ತು ಚಿಕಿತ್ಸಾ ವಾಹನಗಳನ್ನು ಸಂಸದ ಪ್ರತಾಪ್ಸಿಂಹ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕೊರೊನಾ ಬಂದ ನಂತರ ದೇಶದಾದ್ಯಂತ ಆರೋಗ್ಯ ಕ್ಷೇತ್ರದ ಉನ್ನತೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾದರು. ಈ ಹಿಂದೆ ಸಂಸದರಾಗಿದ್ದವರು ಬಳಕೆ ಮಾಡದೆ ಉಳಿದಿದ್ದ ಹಣವನ್ನು ಪ್ರಧಾನಿಯವರು ಹಾಲಿ ಸಂಸದರಿಗೆ ನೀಡಿದ್ದು, ಆರೋಗ್ಯ ಕ್ಷೇತ್ರಕ್ಕೆ ಬಳಕೆ ಮಾಡಿಕೊಳ್ಳಬಹುದೆಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿಗೆ ನಾಲ್ಕು, ಕೊಡಗಿಗೆ ಎರಡು ಅತ್ಯಾಧುನಿಕ ಆ್ಯಂಬ್ಯುಲೆನ್ಸ್ಗಳನ್ನು ನೀಡಲಾಗಿದೆ. ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಪ್ರಾಥಮಿಕ ಜೀವರಕ್ಷಕ ಉಪಕರಣಗಳನ್ನು ಒಳಗೊಂಡ ೧೭ ಲಕ್ಷ ಮೌಲ್ಯದ ಒಂದು ಆ್ಯಂಬ್ಯುಲೆನ್ಸ್ನ್ನು ವೀರಾಜಪೇಟೆಗೆ; ಅತ್ಯಾಧುನಿಕ ಜೀವರಕ್ಷಕ ಉಪಕರಣಗಳನ್ನು ಒಳಗೊಂಡ ರೂ. ೪೨ ಲಕ್ಷ ಮೌಲ್ಯದ
(ಮೊದಲ ಪುಟದಿಂದ) ಮತ್ತೊಂದು ಆ್ಯಂಬ್ಯುಲೆನ್ಸ್ ಅನ್ನು ಮಡಿಕೇರಿಗೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಯ ಬಳಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ೭೫೦ ಬೆಡ್ಗಳನ್ನು ಒಳಗೊಂಡ ಈ ಆಸ್ಪತ್ರೆಯಲ್ಲಿ ಎಲ್ಲ ವಿಧದ ಆರೋಗ್ಯ ಸೇವೆಗಳು ಜನರಿಗೆ ಸಿಗಲಿದೆ. ಆದಷ್ಟು ಶೀಘ್ರ ಈ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ ಎಂದು ವಿವರಿಸಿದರು.
ಉಚಿತವೆಂದರೆ ಯಾರನ್ನು ನಂಬಬೇಡಿ
ಬಿಜೆಪಿ ಸರ್ಕಾರ ಮಾಡಿರುವ ಜನಪರ ಕೆÀಲಸಗಳನ್ನು ಮುಂದಿಟ್ಟುಕೊAಡು ನಾವು ಈ ಬಾರಿಯ ಚುನಾವಣೆಯಲ್ಲಿ ಮತಯಾಚಿಸುತ್ತೇವೆ. ಹೊರತಾಗಿ ಬೇರೆ ಪಕ್ಷಗಳಂತೆ ಉಚಿತವಾಗಿ ಸೌಲಭ್ಯ ಕೊಡುತ್ತೇವೆ ಎಂದು ಆಮಿಷವೊಡ್ಡಿ ಮತ ಕೇಳುವುದಿಲ್ಲ. ಉಚಿತವಾಗಿ ನೀಡುತ್ತೇವೆ ಎಂದರೆ ಕಾಂಗ್ರೆಸ್, ಜೆಡಿಎಸ್ ಜೊತೆಗೆ ಬಿಜೆಪಿಯನ್ನು ಜನತೆ ನಂಬಬೇಡಿ; ತಾನೊಬ್ಬ ಬಿಜೆಪಿ ಕಾರ್ಯಕರ್ತನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ನಾವು ಜನರಿಗಾಗಿ ಮಾಡಿರುವ ಉತ್ತಮ ಕೆಲಸಗಳ ಮೂಲಕ ಜನಾಶೀರ್ವಾದವನ್ನು ಕೇಳುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರುಗಳಿಗೆ ತಮ್ಮ ಕುಟುಂಬ ಸದಸ್ಯರ ಉದ್ಧಾರವೇ ಮುಖ್ಯವಾಗಿದ್ದು, ಸಾರ್ವಜನಿಕರ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಕರ್ನಾಟಕದ ಜನತೆ ಉಚಿತ ಆಮಿಷಗಳಿಗೆ ಮೈಮರೆಯಬಾರದು ಎಂದು ಪ್ರತಾಪ್ ಸಿಂಹ ಹೇಳಿದರು.
ಕ್ಷೇತ್ರ ಭಾಗ್ಯಕ್ಕೆ ಧಕ್ಕೆ
ಮಾಜಿ ಸಚಿವ ಸಿದ್ದರಾಮಯ್ಯ ಅವರು ತಾವು ಮಾಡಿದ ಅನ್ನ ಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯ ಎಂದು ‘‘ಟಾಂ ಟಾಂ’’ ಮಾಡಿಕೊಂಡು, ಕೋಲಾರದಲ್ಲಿ ಸ್ಪರ್ಧಿಸುವ ಅವರ ಪ್ರಯತ್ನ ವಿಫಲಗೊಂಡಿದೆ. ಈಗ ಅವರೇ ಕ್ಷೇತ್ರ ಭಾಗ್ಯಕ್ಕಾಗಿ ಒದ್ದಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು. ಅವರು ಸಮಾರಂಭದ ಬಳಿಕ ಜಿಲ್ಲೆಯ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಅಲ್ಲದೆ ವರುಣಾದಲ್ಲಿ ಅವರ ಮಗ ಯತೀಂದ್ರ ತಾನು ಸ್ಪರ್ಧಿಸ ಬಯಸುವ ವರುಣಾ ಕ್ಷೇತ್ರವನ್ನು ಬಿಟ್ಟು ಕೊಡಲು ತಯಾರಿದ್ದರೂ ಪತ್ನಿ ತನ್ನ ಮಗನ ಭವಿಷ್ಯ ಹಾಳು ಮಾಡಬೇಡಿ ಎಂದು ಅದಕ್ಕೆ ಒಪ್ಪುತ್ತಿಲ್ಲ. ಸಿದ್ದರಾಮಯ್ಯ ಅವರೇ ಸೂಕ್ತ ಕ್ಷೇತ್ರ ಸಿಗದೆ ಒದ್ದಾಡುತ್ತಿರುವಾಗ ಕಾಂಗ್ರೆಸಿಗರು ಇತ್ತ ಗೃಹಲಕ್ಷಿö್ಮ, ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ನೆರವು ಇತ್ಯಾದಿ ಗ್ಯಾರಂಟಿ ಕಾರ್ಡ್ಗಳನ್ನು ನೀಡುತ್ತಿದ್ದಾರೆ. ಇದನ್ನು ಪೂರೈಸಲು ಹೇಗೆ ತಾನೇ ಸಾಧ್ಯ? ರಾಜ್ಯದ ಬಜೆಟ್ನ ಒಟ್ಟು ವಾರ್ಷಿಕ ಮೊತ್ತವೇ ೨ ಲಕ್ಷ ಕೋಟಿಯಾಗಿದೆ. ಈಗ ಕಾಂಗ್ರೆಸಿಗರು ನೀಡುವ ಭರವಸೆ ಈಡೇರಿಸಬೇಕಾದರೆ ರೂ. ಒಂದು ಲಕ್ಷ ಕೋಟಿ ಬೇಕಾಗುತ್ತದೆ. ಇಷ್ಟೊಂದು ಹಣ ನೀಡಿದರೆ ಸರಕಾರದ ಖಜಾನೆ ದಿವಾಳಿಯಾಗುತ್ತದೆ. ಪಂಜಾಬ್ ಸರಕಾರವೂ ಚುನಾವಣೆಗೆ ಮುನ್ನ ಇದೇ ರೀತಿ ಉಚಿತ ನೆರವು ಘೋಷಿಸಿ ಗೆದ್ದ ಬಳಿಕ ಹಣವಿಲ್ಲದೆ ಭರವಸೆ ಈಡೇರಿಕೆಗೆ ವಿಫಲವಾಗಿದೆ. ಇದು ಜನರನ್ನು ಮಂಗ ಮಾಡುವ ಯತ್ನವಾಗಿದೆ ಎಂದು ಸಂಸದರು ಛೇಡಿಸಿದರು.
ಇತ್ತ ಜೆ.ಡಿ.ಎಸ್. ಪ್ರಮುಖರುಗಳಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ರೇವಣ್ಣ ಇವರುಗಳೂ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಭಿನ್ನಮತ ಹೊಂದಿದ್ದು ಕುಟುಂಬ ರಾಜಕಾರಣದ ಆದ್ಯತೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಮರೆತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ಕಿಸಾನ್ ಸಮ್ಮಾನ್, ಗ್ರಾಮ ಸಡಕ್ ಮೊದಲಾದ ಯೋಜನೆಗಳ ಜಾರಿ ಮೂಲಕ ಜನಪರವಾಗಿ ಕೆಲಸ ಮಾಡುವ ಧ್ಯೇಯ ಹೊಂದಿದೆ ಎಂದು ಸಮರ್ಥಿಸಿದರು.
ಈ ಸಂದರ್ಭ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಕುಮಾರ್, ವೈದ್ಯಕೀಯ ಕಾಲೇಜಿನ ಡೀನ್ ಕಳ್ಳಿಚಂಡ ಕಾರ್ಯಪ್ಪ, ಮೂಡಾ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ ಮತ್ತಿತರರು ಇದ್ದರು.