ಮಡಿಕೇರಿ, ಮಾ. ೨೩: ಚುನಾವಣಾ ವರ್ಷದಲ್ಲಿ ದುರಸ್ತಿ ಭಾಗ್ಯ ಕಾಣುವಂತಹ ರಸ್ತೆಗಳೇ ಆಗಲಿ, ನೂರೆಂಟು ಭೂಮಿ ಪೂಜೆ ಶಂಕುಸ್ಥಾಪನೆಗಳಾಗಲಿ ಕ್ಷೇತ್ರದ ನೈಜ ಅಭಿವೃದ್ಧಿ ಅಲ್ಲ ಎಂದು ಅಭಿಪ್ರಾಯಪಟ್ಟಿರುವ ನಾಪೋಕ್ಲುವಿನ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಪ್ರಚಾರ ಬಿಂಬಿತವಾಗಿರುವ ಮಟ್ಟಿಗೆ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದೆ.
ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಪದಾಧಿಕಾರಿಗಳು ಮುಖ್ಯ ಪಟ್ಟಣಗಳಾದ ನಾಪೋಕ್ಲು, ಅಮ್ಮತ್ತಿ, ಗೋಣಿಕೊಪ್ಪ, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ಇಂತಹ ಊರುಗಳಲ್ಲೇ ವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ದೂರಿದರು. ನೂತನ ತಾಲೂಕು ಆಗಿದ್ದರೂ ಪೊನ್ನಂಪೇಟೆ ತಾಲೂಕು ಅವ್ಯವಸ್ಥೆಯ ಆಗರವಾಗಿದೆ, ಭಾಗಮಂಡಲ, ತಲಕಾವೇರಿ ದೇವರ ವ್ಯವಸ್ಥಾಪನಾ ಸಮಿತಿಗೆ ನೂತನ ಆಡಳಿತ ಮಂಡಳಿ ನೇಮಕಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ನಿರುತ್ಸಾಹ ತೋರುತ್ತಿದ್ದಾರೆ; ಅಭಿವೃದ್ಧಿ ಬದಲು ಕಡು ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕುತ್ತಿದ್ದಾರೆ ಎಂದು ಶಾಸಕರ ವಿರುದ್ಧ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ, ಮುಕ್ಕಾಟಿರ ಬಾಬಿ ಚೀಯಣ್ಣ ಇದ್ದರು.