ವೀರಾಜಪೇಟೆ, ಮಾ. ೨೩: ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಶೇ ೩ರಿಂದ ಶೇ೫ ರವರೆಗೆ ತೆರಿಗೆ ಏರಿಕೆ ಮಾಡಿರುವುದನ್ನು ಖಂಡಿಸಿ ನಗರ ಕಾಂಗ್ರೆಸ್ ವತಿಯಿಂದ ಪುರಸಭೆ ಎದುರು ಪ್ರತಿಭಟನೆ ನಡೆಯಿತು.
ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ ರಾಜ್ಯದಲ್ಲಿ ಕೊರೊನಾ ಬಂದ ನಂತರ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. ಪಟ್ಟಣ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಪುರಸಭೆ ಕೇವಲ ತೆರಿಗೆ ಕಟ್ಟಿಸಿಕೊಳ್ಳಲು ಮಾತ್ರ ಸೀಮಿತವಾಗಿದೆ. ತುರ್ತು ಸಭೆಯಲ್ಲಿ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಈಗಾಗಲೆ ಜನ ಸಾಮಾನ್ಯರು ಕೇಂದ್ರದ ಜನವಿರೋಧಿ ನೀತಿಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೆ ಹೆಚ್ಚಳ ಮಾಡಿರುವ ತೆರಿಗೆಯನ್ನು ಹಿಂದಿನ ದರಕ್ಕೆ ಪರಿಷ್ಕರಿಸಬೇಕು ಇಲ್ಲದಿದ್ದರೆ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.ಹಿರಿಯ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ಪುರಸಭೆಯಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಎರಡುವರೆ ವÀರ್ಷ ಕಳೆದರೂ ಪಟ್ಟಣದಲ್ಲಿ ಅಭಿವೃದ್ದಿ ಶೂನ್ಯವಾಗಿದೆ. ಪ್ರತಿ ವರ್ಷ ತೆರಿಗೆಯನ್ನು ಹೆಚ್ಚಳ ಮಾಡಲಾಗುತ್ತಿದೆ. ಸರ್ಕಾರದ ನಿಯಮದ ಪ್ರಕಾರ ತೆರಿಗೆ ಹೆಚ್ಚಳ ಮಾಡಬೇಕಾದರೆ ಮಾಸಿಕ ಸಭೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಮೊನ್ನೆ ನಡೆದ ತುರ್ತು ಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಆದರೂ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು. ಸದಸ್ಯ ರಂಜಿ ಪೂಣಚ್ಚ ಮಾತನಾಡಿ, ನೀರಿನ ಕರ ಹಾಗೂ ವಾಣಿಜ್ಯ ಕಟ್ಟಡಗಳು ಸೇರಿದಂತೆ ಮನೆಗಳ ತೆರಿಗೆಯನ್ನು ಶೇ ೩ ಕ್ಕೆ ಏರಿಸಲಾಗಿದೆ. ಸಭೆಯಲ್ಲಿ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರು ಸದಸ್ಯರನ್ನು ಕಡೆಗಣಿಸಿ ನಿರ್ಣಯ ಕ್ಯೆಗೊಳ್ಳಲಾಗಿದೆ ಎಂದು ಆರೋಪಿಸಿದರು. ಸದಸ್ಯ ಮತೀನ್ ಮಾತನಾಡಿದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ, ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿ ತುರ್ತು ಸಭೆ ಕರೆಯಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಮಹಮದ್ ರಾಫಿ, ಅಗಸ್ಟಿನ್ ಬೆನ್ನಿ, ಫಿಸಿಹಾ ತಬಸಮ್, ಮಾಜಿ ಅಧ್ಯಕ್ಷ ಸತೀಶ್, ಹಿರಿಯ ಮುಖಂಡ ಮಾದಂಡ ಪೂವಯ್ಯ, ಮಾಜಿ ನಗರ ಅಧ್ಯಕ್ಷ ಜಿ.ಜಿ ಮೋಹನ್, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಡಿ.ಸಿ ಧ್ರುವ, ನಗರ ಕಾರ್ಯದರ್ಶಿ ಶಶಿಧರನ್ ಮತ್ತಿತರರು ಉಪಸ್ಥಿತರಿದ್ದರು.