ಕೊಡಗು ಜಿಲ್ಲೆ ಸೈನಿಕರ ನಾಡು ಎಂಬ ಹೆಗ್ಗಳಿಕೆ ಹೊಂದಿದೆ. ಇದನ್ನು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಪ್ರತಿಬಿಂಬಿಸುತ್ತದೆ. ನಗರಕ್ಕೆ ಮೈಸೂರು ರಸ್ತೆಯ ಮೂಲಕ ಆಗಮಿಸುತ್ತಿರುವಂತೆ ಸೇನಾನಿಗಳ ಪ್ರತಿಮೆಗಳು ಸ್ವಾಗತಿಸುತ್ತವೆ. ಇದರಲ್ಲಿ ಒಂದಾಗಿರುವುದು ಚಿಕ್ಕಪೇಟೆಯಲ್ಲಿರುವ (ಜನರಲ್ ತಿಮ್ಮಯ್ಯ ವೃತ್ತ) ವೀರ ಸೇನಾನಿ ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರ ಕಂಚಿನ ಪ್ರತಿಮೆ. ಈ ಪ್ರತಿಮೆ ನಿರ್ಮಾಣಗೊಂಡು ಇದೀಗ ೫೦ ವರ್ಷಗಳಾಗಿವೆ. ೧೯೭೩ರ ಮಾರ್ಚ್ ೨೦ ರಂದು ಈ ಪ್ರತಿಮೆ ಜಿಲ್ಲೆಯಲ್ಲಿ ಅಳವಡಿಸಲ್ಪಟ್ಟಿದ್ದು, ಇದೀಗ ಸುವರ್ಣ ಮಹೋತ್ಸವ ವರ್ಷವಾಗಿದೆ. ಈ ಪ್ರತಿಮೆ ಸ್ಥಾಪನೆ ಅಳವಡಿಕೆಯ ಕುರಿತಾದ ಒಂದಷ್ಟು ವಿಚಾರಗಳು ಹೀಗಿವೆ...

ನಾಡಿನ ಯುವ ಜನತೆ ಮತ್ತು ಸೈನ್ಯದ ಬಹುತೇಕ ಎಲ್ಲ ಅಧಿಕಾರಿಗಳು ಹಾಗೂ ಸಿಪಾಯಿಗಳ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದ ಜನರಲ್ ತಿಮ್ಮಯ್ಯ ಅವರ ಸವಿನೆನಪಿಗಾಗಿ ಅವರ ಹುಟ್ಟೂರಾದ ಮಡಿಕೇರಿಯಲ್ಲಿ ಒಂದು ಪ್ರತಿಮೆಯನ್ನು ಸ್ಥಾಪಿಸಬೇಕೆಂಬ ನಿರ್ಧಾರಕ್ಕೆ ಬಂದವರು ಮಾಜಿ ಸಚಿವ ಯಂ. ಸಿ. ನಾಣಯ್ಯ ಅವರು. ಮಡಿಕೇರಿ ಪುರಸಭೆಯ ಅಧ್ಯಕ್ಷರಾಗಿದ್ದ ನಾಣಯ್ಯ ಅವರ ನಿಲುವಿಗೆ ಸದಸ್ಯರುಗಳ ಒಮ್ಮತದ ಸಹಕಾರವೂ ಸಿಗುತ್ತದೆ. ಇದಕ್ಕೆ ಬೇಕಾದ ಹಣಕಾಸು ವ್ಯವಸ್ಥೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಖುದ್ದು ನಾಣಯ್ಯ ಅವರೇ ನಿಭಾಯಿಸಬೇಕಾಯಿತು.

ಈ ಮಹತ್ಕಾರ್ಯಕ್ಕೆ ನೆರವನ್ನು ಕೋರಿ ನಾಣಯ್ಯ ಅವರು ಕೆಲವು ದಾನಿಗಳಿಗೆ ಪತ್ರ ಬರೆಯುತ್ತಾರೆ. ಅದೇ ರೀತಿ ಸೇನಾ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಾರೆ.

ಕಾರ್ಯ ಯೋಜನೆಯಂತೆ ಕರ್ನಾಟಕ ಸರಕಾರದಿಂದ ಹತ್ತು ಸಾವಿರ ರೂಪಾಯಿಗಳನ್ನು ಮಂಜೂರು ಮಾಡುವಂತೆ ಕೋರಿಕೊಂಡಾಗ ಸರಕಾರ ಒಂದು ಸಾವಿರದ ಐನೂರು ರೂಪಾಯಿಯನ್ನು ಮಂಜೂರು ಮಾಡುತ್ತದೆ. ಕರ್ನಾಟಕ ರಾಜ್ಯಪಾಲರ ಆಡಳಿತಕ್ಕೆ ಒಳಪಟ್ಟಿದ್ದರಿಂದ ರಾಜ್ಯಪಾಲರಾಗಿದ್ದ ಧರ್ಮವೀರ ಅವರನ್ನು ಸಂಪರ್ಕಿಸಲಾಗುತ್ತದೆ. ಧರ್ಮವೀರ ಅವರಿಗೆ ಜನರಲ್ ತಿಮ್ಮಯ್ಯ ಅವರ ಕುರಿತಂತೆ ಹೆಮ್ಮೆಯಿತ್ತು ಮತ್ತು ಪ್ರತಿಮೆಯ ಸ್ಥಾಪನೆ ಬಗ್ಗೆ ಸವಿವರವಾಗಿ ಮನದಟ್ಟು ಮಾಡಿದ್ದರಿಂದ ಒಂದೇ ಕಂತಿನಲ್ಲಿ ಹತ್ತು ಸಾವಿರಗಳನ್ನು ಕೊಡಿಸುತ್ತಾರೆ.

ಕೆ.ಡಿ.ಸಿ.ಸಿ. ಬ್ಯಾಂಕ್ ಮತ್ತು ಸಹಕಾರ ಸಂಘಗಳ ಬೆಂಬಲವನ್ನು ಕೋರಲಾಯಿತಲ್ಲದೆ, ಅಂದು ತಾವು ಕರ್ನಾಟಕ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕ ರಾಗಿದ್ದರಿಂದ ನಾಣಯ್ಯನವರಿಗೆ ಹಣ ಸಂಗ್ರಹಣೆಗೆ ಅನುಕೂಲವಾಗಿತ್ತು.

ಧನ ಸಂಗ್ರಹಣೆ ಒಂದು ಹಂತಕ್ಕೆ ತಲುಪುತ್ತಿದ್ದಂತೆ ಪ್ರತಿಮೆ ನಿರ್ಮಾಣಕ್ಕೆ ಜನರಲ್ ತಿಮ್ಮಯ್ಯ ಅವರ ನಿಂತ ಭಂಗಿಯ ಚಿತ್ರವನ್ನು ಸಂಗ್ರಹಿಸಿ ಕೊಡಬೇಕಿತ್ತು ಅದು ಯಾರ ಬಳಿಯೂ ಸಿಗಲಿಲ್ಲ.

ಜನರಲ್ ತಿಮ್ಮಯ್ಯ ಅವರು ಸೈಪ್ರಸ್‌ನಲ್ಲಿ ಶಾಂತಿ ಸ್ಥಾಪನಾ ಪಡೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರಿಂದ ಅಲ್ಲಿಯಾದರೂ ಸಿಗಬಹುದೆಂಬ ನಂಬಿಕೆಯಿAದ Uಓಔ ಕಚೇರಿಗೆ ಪತ್ರ ಮುಖಾಂತರ ಸಂಪರ್ಕಿಸುತ್ತಾರೆ, ಅಲ್ಲಿಂದ ಈ ಕಾರ್ಯಯೋಜನೆ ಬಗ್ಗೆ ಮೆಚ್ಚಿ ಪತ್ರ ಮತ್ತು ಹತ್ತಾರು ಭಾವಚಿತ್ರಗಳನ್ನು ಕಳುಹಿಸಿ ಕೊಡುತ್ತಾರೆ. ಇವುಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಭಾವಚಿತ್ರದ ಆಧಾರದ ಮೇಲೆ ನಿರ್ಮಿಸಲಾದ ಪ್ರತಿಮೆಯೇ ಇಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಂಗೊಳಿಸುತ್ತಿರುವುದು.

ಪ್ರತಿಮೆ ನಿರ್ಮಾಣಕ್ಕೆ ಶಿಲ್ಪಿಯ ಕೊಡುಗೆ : ಮುಂಬೈಯ ಹೆಸರಾಂತ ಶಿಲ್ಪಿ ವಾಗ್ ಅವರ ಸಂಪರ್ಕವಾಗುತ್ತದೆ. ವಾಗ್ ಅವರು ಜನರಲ್ ತಿಮ್ಮಯ್ಯ ಅವರ ಬಗ್ಗೆ ಸದಾಭಿಪ್ರಾಯವನ್ನು ಹೊಂದಿದವರಾಗಿದ್ದರಿAದ ನಿರ್ಮಾಣದ ಸಂಭಾವನೆ ನನಗೆ ಬೇಡ, ಅದಕ್ಕೆ ತಗಲುವ ಖರ್ಚಿನ ಹಣ ಮಾತ್ರ ಸಾಕೆಂದು, ಐವತ್ತು ಸಾವಿರಗಳಿಂದ ತಮ್ಮ ಸಂಭಾವನೆಯನ್ನು ಬಿಟ್ಟು ಕೇವಲ ಮೂವತ್ತು ಸಾವಿರಕ್ಕೆ ನಿರ್ಮಿಸುವ ಒಪ್ಪಂದಕ್ಕೆ ಬರುತ್ತಾರೆ.

ಒಬ್ಬ ಶಿಲ್ಪಿ ತಮ್ಮ ನೆಚ್ಚಿನ ಸೇನಾಧಿಕಾರಿಗಾಗಿ ತಮ್ಮ ಸಂಭಾವನೆಯನ್ನು ತ್ಯಾಗ ಮಾಡಿದ್ದನ್ನು ಕಂಡು ಖುದ್ದು ನಾಣಯ್ಯ ಅವರೇ ಬೆರಗಾಗುತ್ತಾರೆ. ಪ್ರತಿಮೆಯ ಕೆಲಸ ಆರಂಭವಾಗು ತ್ತದೆ ಈ ಸಂದರ್ಭದಲ್ಲಿ ಪದೇ-ಪದೇ ನಾಣಯ್ಯ ಅವರಿಗೆ ಮುಂಬೈಗೆ ಹೋಗಿ ಬರುವುದು ಕಷ್ಟ ಎಂದು ಮನದಟ್ಟಾಗುತ್ತಿದ್ದಂತೆ ಮುಂಬೈಯಲ್ಲಿ ನೆಲಸಿದಂತಹ ಕೋದಂಡ ಕುಟುಂಬದ ಸಹೋದರಿಯರು ವಹಿಸಿಕೊಳ್ಳುತ್ತಾರೆ.

ಮಾಣಿಕ್ ಷಾ ಅವರಿಂದ ಅನಾವರಣ

ಬಾಂಗ್ಲಾದೇಶ ವಿಮೋಚನಾ ಸಮರದಲ್ಲಿ ಭಾರತವು ಜಯಗಳಿಸಿ ಜನರಲ್ ಮಾಣಿಕ್ ಷಾ ಅವರು ಆಗ ದೇಶದ ಮನೆ ಮಾತಾಗಿದ್ದರು. ಹೀಗಾಗಿ ಅವರನ್ನೇ ಕರೆಸಿ ಅನಾವರಣಗೊಳಿಸಬೇಕೆಂಬ ಅಸೆ ನಾಣಯ್ಯ ಅವರಲ್ಲಿ ಮೂಡುತ್ತದೆ, ಅಗ ನೆನಪಿಗೆ ಬರುತ್ತಾರೆ ಕೇಂದ್ರದಲ್ಲಿ ಅಂದು ಕೈಗಾರಿಕೆ ಮಂತ್ರಿಗಳಾಗಿದ್ದ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು. ನಾಣಯ್ಯ ಅವರೊಂದಿಗೆ ಷಾ ಅವರ ಭೇಟಿಗೆ ದಿನವನ್ನು ನಿಗದಿಪಡಿಸಿಕೊಂಡು ನಾಣಯ್ಯನವರ ಪರವಾಗಿ ವಿನಂತಿಸಿ ಕೊಂಡಾಗ ಜನರಲ್ ಮಾಣಿಕ್ ಷಾ ರವರು ದಂಪತಿ ಸಮೇತರಾಗಿ ಬರಲು ಒಪ್ಪಿಕೊಳ್ಳುತ್ತಾರೆ. ರಾಜ್ಯ ಸರಕಾರದ ಅತಿಥಿಗಳಾಗಿ ಮಾಣಿಕ್ ಷಾ ಪತ್ನಿ ಸಮೇತರಾಗಿ ಆಗಮಿಸುತ್ತಾರೆ ಅವರೊಂದಿಗೆ ಎಸ್.ಎಂ. ಕೃಷ್ಣ ಅವರೂ ಪಾಲ್ಗೊಳ್ಳುತ್ತಾರೆ. ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನ ಜನತೆ ಪಾಲ್ಗೊಂಡು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗುತ್ತಾರೆ.

ಜನರಲ್ ತಿಮ್ಮಯ್ಯ ಅವರ ಪ್ರತಿಮೆಯ ಸ್ಥಾಪನೆಗೆ ಎರಡು ವರ್ಷಗಳ ಕಾಲ ಪರಿಶ್ರಮಿಸಿದರೂ ಶಿಲಾನ್ಯಾಸದಲ್ಲಿ ತಮ್ಮ ಹೆಸರು ಕಾಣುವುದು ಅವರಿಗೆ ಬೇಕಾಗಿರಲಿಲ್ಲ. ಉಳಿದಂತೆ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರ ಹೆಸರುಗಳನ್ನು ಈಗಲೂ ಕಾಣಬಹುದು.

ಪ್ರತಿಮೆ ಸ್ಥಾಪನೆಯ ಸುವರ್ಣ ವರ್ಷದ ಈ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ದೇಶ ಭಕ್ತಿ ಮತ್ತು ದೇಶ ಸೇವೆಗೆ ಮುಡಿಪಾಗಿ ಸ್ಮರಣೀಯರಾಗಿರುವ ಕಾಲ ಕಾಲಕ್ಕೂ ಅವರ ಶಿಸ್ತಿನ ಗಂಭೀರತೆಯನ್ನು ನೆನಪಿಸಿಕೊಳ್ಳುವಂತೆ ಜನರಲ್ ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯನ್ನು ನೆಲೆಗೊಳಿಸಿದ ಹಿರಿಯರಾದ ಯಂ. ಸಿ. ನಾಣಯ್ಯ ಅವರು ಮತ್ತು ಸಹವರ್ತಿಗಳಾಗಿದ್ದ ಪ್ರತಿಯೊಬ್ಬರಿಗೂ ಬಿಗ್ ಸೆಲ್ಯೂಟ್.

- ಕೆ.ಎಸ್. ಅನಿಲ್ ಕುಮಾರ್, ಸುಂಟಿಕೊಪ್ಪ

ಕೃಪೆ : ನೆನಪುಗಳು ಮಾಸುವ ಮುನ್ನ ಪುಸ್ತಕ