ಹಿರಿಯ ಸ್ವಯಂಸೇವಕ ವಿ.ಹಿಂ.ಪನ ಸಕ್ರಿಯ ಕಾರ್ಯಕರ್ತರಾಗಿದ್ದ ಬೆ.ಸು. ಶೇಷಾದ್ರಿ (೭೪) ಅವರು ಗುರುವಾರ ರಾತ್ರಿ ಬೇಲೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮಡಿಕೇರಿಯಲ್ಲಿ ವಿ.ಹಿಂ.ಪ.ನಿAದ ನಿರ್ವಹಿಸಲ್ಪಡುತ್ತಿರುವ ಅಶ್ವಿನಿ ಅಸ್ಪತ್ರೆಯ ಆರಂಭದ ದಿನಗಳಿಂದಲೂ ಅದರ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ನೆನಪಿಸಿಕೊಂಡಿರುವ ವಿ. ಹಿಂ. ಪ. ದಕ್ಷಿಣ ಭಾರತದ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಅವರು ಶೇಷಾದ್ರಿ ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಾಮಾಣಿಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು ಎಂದಿದ್ದಾರೆ. ಅಲ್ಲದೆ, ಆರು ದಶಕಕ್ಕೂ ಹೆಚ್ಚು ಕಾಲ ವಿ.ಹಿಂ.ಪ.ನ ಸಕ್ರಿಯ ಕಾರ್ಯ ಕರ್ತರಾಗಿ ಕಾರ್ಯನಿರ್ವಹಿಸಿದ್ದರು ಎಂದು ಜ್ಞಾಪಿಸಿಕೊಂಡಿದ್ದಾರೆ.
ತಮ್ಮ ನಿಸೃಹತೆಯ ಕಾರಣದಿಂದಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿಯೂ ಎದೆಗುಂದದೆ, ತಮ್ಮ ನಿಲುವಿನಲ್ಲಿ ರಾಜಿಮಾಡಿಕೊಳ್ಳದ ಅಸಾಮಾನ್ಯ ವ್ಯಕ್ತಿತ್ವ ಶೇಷಾದ್ರಿಯವರದ್ದು ಎಂದು ಅಭಿಪ್ರಾಯಪಟ್ಟಿರುವ ಕೇಶವ ಹೆಗಡೆ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶೇಷಾದ್ರಿ ಅವರು ಅವಿವಾಹಿತರಾಗಿದ್ದರು.
ಇಂದು ಅಶ್ವಿನಿ ಆಸ್ಪತ್ರೆಯಲ್ಲಿ ಕಾರ್ಯದರ್ಶಿ ರಾಜಪ್ಪ ಅವರು ಸಂತಾಪ ಸಭೆ ನಡೆಸಿದ್ದು, ವೈದ್ಯರು ಮತ್ತು ಸಿಬ್ಬಂದಿ ವರ್ಗ ಸೇರಿದ್ದು, ಶೇಷಾದ್ರಿ ಅವರ ನಿಧನಕ್ಕೆ ಈ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.