ಮಡಿಕೇರಿ, ಮಾ. ೨೩: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಘಟಕದ ವತಿಯಿಂದ ನಗರದ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಲು ಆದೇಶಿಸಿದ್ದು, ಹಿಂದಿನ ಬಾಕಿಯನ್ನು ಪರಿಗಣಿಸದೆ ಎಲ್ಲಾ ರೈತರಿಗೂ ಉಚಿತ ವಿದ್ಯುತ್ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಿದ್ದರೂ ಕೂಡ ಮುಖ್ಯಮಂತ್ರಿಗಳ ಆದೇಶವನ್ನು ಉಲ್ಲಂಘಿಸಿ ಚೆಸ್ಕಾಂ ಎಂ.ಡಿ. ಜಯವೈಭವ ಸ್ವಾಮಿ, ಜಿಲ್ಲಾ ಕಾರ್ಯಪಾಲಕ ಇಂಜಿನಿಯರ್ ಅನಿತಾಬಾಯಿ ಅವರುಗಳು ಹಳೆಯ ಬಾಕಿ ವಸೂಲಾತಿ ನೆಪದಲ್ಲಿ ರೈತರ ವಿದ್ಯುತ್ ಪಂಪ್‌ಸೆಟ್‌ಗಳ ಸಂಪರ್ಕವನ್ನು

(ಮೊದಲ ಪುಟದಿಂದ) ಕಡಿತಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದು, ಈ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅನಿತಾ ಬಾಯಿ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಮುಖ್ಯಮಂತ್ರಿಗಳ ಆದೇಶ ಉಲ್ಲಂಘಿಸಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾಗಿ ರೈತರಿಗೆ ತೊಂದರೆ ಕೊಡುತ್ತಿರುವ ಹಿನ್ನೆಲೆಯಲ್ಲಿ ರೈತರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು. ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಪ್ರಧಾನ ಕಾರ್ಯದರ್ಶಿ ಸುಜೈ ಬೋಪಯ್ಯ, ವಕೀಲ ಹೇಮಚಂದ್ರ, ಲಕ್ಷö್ಮಣ್ ಮತ್ತಿತರರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಅನಿತಾಬಾಯಿ ಅವರು ರೈತರ ಕ್ಷಮೆ ಯಾಚಿಸಲೇಬೇಕೆಂದು ಪಟ್ಟು ಹಿಡಿದರು. ರೈತರು ಈ ದೇಶದ ಬೆನ್ನೆಲುಬಾಗಿದ್ದು, ಮುಖ್ಯಮಂತ್ರಿಗಳು ಆದೇಶ ನೀಡಿದ ಮೇಲೂ ಅದನ್ನು ನಿರ್ಲಕ್ಷಿಸಿ ರೈತರಿಗೆ ತೊಂದರೆ ಕೊಡುತ್ತಿರುವ ಕ್ರಮ ಸರಿಯಲ್ಲ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಅನಿತಾ ಬಾಯಿ ಅವರು ಆದೇಶದಂತೆ ತಾನು ಕೆಲಸ ಮಾಡಿದ್ದು, ಇದರಿಂದ ರೈತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದರು. ಹಳೆಯ ಆದೇಶವನ್ನಿಟ್ಟುಕೊಂಡು ರೈತರಿಗೆ ತೊಂದರೆ ಕೊಡುವುದು ಸರಿಯಲ್ಲ. ಮುಖ್ಯಮಂತ್ರಿಗಳ ಆದೇಶ ಪಾಲನೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಲ್ಲದೆ, ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.

ಬೇಡಿಕೆಗಳೇನು?

ರೈತ ಕರೆ ಕಳುಹಿಸಿದ ಸಂದರ್ಭ, ರೈತರ ತೋಟದಲ್ಲಿನ ವಿದ್ಯುತ್ ಲೈನ್ ನಿರ್ವಹಣೆ ಮಾಡಲು ಹಾಗೂ ರೈತರ ವಿದ್ಯುತ್ ಬಳಕೆ ಸಂದರ್ಭ ನ್ಯಾಯಬದ್ಧ ಬಿಲ್ ನೀಡಲು ಮಾತ್ರ ಸೆಸ್ಕ್ ಅಧಿಕಾರಿ, ಸಿಬ್ಬಂದಿ ರೈತರ ಜಮೀನುಗಳಿಗೆ ಪ್ರವೇಶಿಸಬೇಕು. ಉಳಿದಂತೆ ಬೇರೆ ಯಾವುದೇ ಕಾರಣಕ್ಕೂ ಪ್ರವೇಶಿಸಬಾರದು.

ಹಲವು ವರ್ಷಗಳಿಂದ ರೈತರ ಸಮಸ್ಯೆ ಅರಿಯುವ ಕಾರಣ ಮುಂದೊಡ್ಡಿ ವಿದ್ಯುತ್ ಇಲಾಖೆ ‘ವಿದ್ಯುತ್ ಅದಾಲತ್’ ನಡೆಸುತ್ತಿದೆ. ವಿದ್ಯುತ್ ಇಲಾಖೆಯ ಅಧಿಕಾರಿಗಳೇ ಇದರ ನೇತೃತ್ವ ವಹಿಸುತ್ತಿದ್ದಾರೆ. ರೈತರ ಆರೋಪಗಳೆಲ್ಲವೂ ವಿದ್ಯುತ್ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧವಾಗಿರುವಾಗ ಆರೋಪ ಹೊತ್ತ ಅಧಿಕಾರಿಗಳೇ ಈ ಅದಾಲತ್‌ನ ಮುಖ್ಯಸ್ಥರಾಗುವುದು ಎಷ್ಟು ಸರಿ? ಆದ್ದರಿಂದ ಇಂತಹ ಅದಾಲತ್‌ಗಳ ಮುಖ್ಯಸ್ಥರನ್ನಾಗಿ ನಿವೃತ್ತ ನ್ಯಾಯಾಧೀಶರುಗಳನ್ನು ನೇಮಕಾತಿ ಮಾಡಬೇಕು.

ಈ ಹಿಂದೆ ಇಲಾಖೆ ಮೀಟರ್ ರೀಡಿಂಗ್ ಕೆಲಸವನ್ನು ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದ್ದು, ಅವರು ರೈತರ ಮನೆಗೆ ತೆರಳದೇ ಇಲಾಖೆಯನ್ನು ವಂಚಿಸಿ ಹಣ ಪಡೆದಿದ್ದಾರೆ. ಈ ವಂಚಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಇಲಾಖೆ ನಂತರ ಕೋಟ್ಯಂತರ ರೂ.ಗಳನ್ನು ರೈತರಿಂದ ವಿದ್ಯುತ್ ಬಳಕೆ ಶುಲ್ಕ ಎಂದು ಬಲಾತ್ಕಾರವಾಗಿ ವಸೂಲಿ ಮಾಡಿಕೊಂಡಿದೆ. ಈ ಹಣವನ್ನು ರೈತರಿಗೆ ಶೇಕಡ ೧೮ರಂತೆ ಬಡ್ಡಿ ಸಹಿತ ಹಿಂತಿರುಗಿಸಿ ಇಲಾಖೆಗೆ ಮೋಸ ಮಾಡಿರುವ ವ್ಯಕ್ತಿಗಳಿಂದ ಆ ಹಣವನ್ನು ವಸೂಲಿ ಮಾಡಿಕೊಳ್ಳಬೇಕು.

ಕಳೆದ ಕೆಲವು ವರ್ಷಗಳಿಂದ ಎತ್ತರದ ಕಾಂಕ್ರಿಟ್ ಕಂಬಗಳನ್ನು ನೆಡುವ ನೆಪದಲ್ಲಿ ಇಡೀ ಕೊಡಗಿನ ಎಲ್ಲಾ ವಿದ್ಯುತ್ ಲೈನ್‌ಗಳನ್ನು ಎತ್ತರ ಮಾಡಲಾಗಿದ್ದು, ಈ ಸಂದರ್ಭ ಕೆಲಸಕ್ಕಾಗಿ ಉತ್ತರ ಭಾರತದಿಂದ ಜನರನ್ನು ಕರೆದು ತಂದು ವಿದ್ಯುತ್ ತಂತಿ ಕೂರಿಸುವ ಕಂಬದ ಮೇಲೆ ಅಳವಡಿಸುವ ಎಲ್ಲಾ ಕಬ್ಬಿಣದ ಉಪಕರಣಗಳನ್ನು ಬದಲಿಸಲಾಗಿದೆ. ಈ ಕಾರ್ಯದಲ್ಲಿ ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ಅಧಿಕಾರಿಗಳ ಮುಂದಿಟ್ಟರು.

ಪ್ರತಿಭಟನೆಯಲ್ಲಿ ರೈತ ಸಂಘದ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಖಜಾಂಚಿ ಇಟ್ಟೀರ ಸಬಿತ ಭೀಮಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಮತ್ತಿತರರು ಭಾಗವಹಿಸಿದ್ದರು.