ಗೋಣಿಕೊಪ್ಪಲು, ಮಾ. ೨೩: ಸೇವೆ ಮುಗಿಸಿ ನಿವೃತ್ತಿಗೊಳ್ಳುವ ಯೋಧರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ದೊರೆಯುತ್ತಿಲ್ಲ. ಬೇಡಿಕೆಗಳೂ ಈಡೇರಿಲ್ಲ. ನ್ಯಾಯೋಚಿತ ಬೇಡಿಕೆಗಳು ಈಡೇರಬೇಕಾದರೆ, ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ನ್ಯಾಯಾಂಗ ವ್ಯವಸ್ಥೆಯಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ, ಹೈಕೋರ್ಟ್ನ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ಕೊಡಗು ಜಿಲ್ಲಾ ಅರೆಸೇನಾಪಡೆ ಮಾಜಿ ಯೋಧರ ಒಕ್ಕೂಟವು ಆಯೋಜಿಸಿದ್ದ ಯೋಧರ ಕುಂದು ಕೊರತೆ ವಿಚಾರ ವಿನಿಮಯ ಸಮಾವೇಶದಲ್ಲಿ ಜ್ಯೋತಿ ಬೆಳಗಿಸುವುದರ ಬಳಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
(ಮೊದಲ ಪುಟದಿಂದ) ಪೊನ್ನಣ್ಣ, ಕೊಡಗು ಜಿಲ್ಲೆಯು ಯೋಧರ ತವರೂರಾಗಿದೆ. ಸೇನೆಯಿಂದ ನಿವೃತ್ತಿಗೊಂಡ ನಂತರ ಯೋಧರಿಗೆ ಸಿಗಬೇಕಾದ ಕನಿಷ್ಟ ಸವಲತ್ತುಗಳು ಸಿಗದಿರುವುದು ಬೇಸರದ ಸಂಗತಿ. ಸೇನೆಯಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ನಿವೃತ್ತಿ ನಂತರ ತವರೂರಿಗೆ ಆಗಮಿಸುವ ಯೋಧರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಯೋಧರ ಬಹುಕಾಲದ ಪ್ರಮುಖ ಬೇಡಿಕೆಯಾದ ಉಚಿತ ನಿವೇಶನ ಹಾಗೂ ಕೃಷಿ ಭೂಮಿಯನ್ನು ನೀಡಲು ಸರ್ಕಾರ ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹೋರಾಟ ಕೈಗೊಳ್ಳಬೇಕಾಗಿದೆ. ಇರುವ ಭೂಮಿಗಳು ಭೂಗಳ್ಳರ ಕೈಯಲ್ಲಿ ಸಿಲುಕಿರುವುದರಿಂದ ಭೂಮಿಯು ಲಭ್ಯವಿಲ್ಲವೆಂದು ಆಡಳಿತ ವರ್ಗ ಸಮಜಾಯಿಷಿಕೆ ನೀಡುತ್ತಿದೆ. ಇದನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಯೋಧರ ಹಲವು ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ. ಆದರೆ ಇವುಗಳು ಕೇಂದ್ರ ಮಟ್ಟದಲ್ಲಿ ಜಾರಿಯಾಗಬೇಕಾಗಿದೆ. ಕೆಲವು ಬೇಡಿಕೆ ಈಡೇರಿದ್ದು, ಇನ್ನೂ ಕೆಲವು ಹಾಗೆಯೇ ಉಳಿದಿದೆ. ಕೆಲವೊಂದು ನ್ಯಾಯಾಲಯದ ಮೂಲಕ ನ್ಯಾಯ ಕೊಡಿಸುವಲ್ಲಿ ತಾನು ಯಶಸ್ವಿಯಾಗಿದ್ದೇನೆ. ಯೋಧರ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗಿದೆ. ಹೀಗಾಗಿ ಇಂತಹ ಸಮಸ್ಯೆಗಳಿಗಾಗಿ ಪರಿಹಾರ ಕಂಡುಕೊಳ್ಳಲು ವಕೀಲರ ತಂಡವನ್ನು ನಿಯೋಜಿಸಿದ್ದೇನೆ. ಇವರು ಯೋಧರ ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ಉಚಿತವಾಗಿ ಪ್ರಶ್ನಿಸಲಿದ್ದಾರೆ. ನನಗೆ ಅಧಿಕಾರ ಲಭಿಸಿದಲ್ಲಿ ಬದ್ಧತೆಯಿಂದ ಸೇವೆ ಮಾಡುವುದಾಗಿ ಭರವಸೆ ನೀಡಿದರು.
ಚುನಾವಣೆಗೆ ನಿಲ್ಲಲು ರಾಜಕೀಯವಾಗಿ, ಜಾತ್ಯತೀತವಾಗಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿರುವೆ ಎಂದು ಎ.ಎಸ್. ಪೊನ್ನಣ್ಣ ತಿಳಿಸಿದರು.
ಕೊಡಗು ಜಿಲ್ಲಾ ಅರೆಸೇನಾಪಡೆ ಮಾಜಿ ಯೋಧರ ಒಕ್ಕೂಟದ ಅಧ್ಯಕ್ಷ ಪುಲಿಯಂಡ ಎಂ.ಚAಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹಲವು ದಶಕಗಳಿಂದ ಅರೆಸೇನಾಪಡೆ ಮಾಜಿ ಯೋಧರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಭೇಟಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೆಲವು ದಿನಗಳ ಹಿಂದೆ ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿದ ಸಂದರ್ಭ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಲಭಿಸಿದೆ. ಇದರಿಂದ ಯೋಧರ ಹಲವು ಸಮಸ್ಯೆಗಳು ಪರಿಹಾರ ಕಂಡಿವೆ. ಆ ನಿಟ್ಟಿನಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಯೋಧರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ನಿವೃತ್ತಿ ನಂತರ ಯೋಧರು ಅನುಭವಿಸುತ್ತಿರುವ ಕಷ್ಟಗಳು ಅರಿವಾಗಿವೆ. ಈ ನಿಟ್ಟಿನಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಇದರ ಜವಾಬ್ದಾರಿಯನ್ನು ಎ.ಎಸ್. ಪೊನ್ನಣ್ಣನವರು ನಿಭಾಯಿಸುತ್ತಾರೆಂಬ ನಂಬಿಕೆ ಇದೆ ಎಂದರು.
ಸಭೆಯಲ್ಲಿ ಕೊಡಗು ಜಿಲ್ಲಾ ಅರೆಸೇನಾಪಡೆ ಮಾಜಿ ಯೋಧರ ಒಕ್ಕೂಟದ ಪ್ರಮುಖರಾದ ದೇಯಂಡ ಜಯ ಚಂಗಪ್ಪ, ಕಾರ್ಯದರ್ಶಿ ಎ.ಎಂ. ಭೀಮಯ್ಯ ಸಲಹೆಗಾರ ಕೆ.ಎಸ್. ಆನಂದ್, ತಾಪಂಡ ಟಿ. ಮುತ್ತಣ್ಣ, ಸೇರಿದಂತೆ ಇನ್ನಿತರ ಪ್ರಮುಖರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಸಭೆಯ ಆರಂಭಕ್ಕೆ ಮುನ್ನ ನೂರಾರು ಯೋಧರೊಂದಿಗೆ ತೆರಳಿದ ಎ.ಎಸ್. ಪೊನ್ನಣ್ಣ, ಸಿ.ಎಸ್. ಅರುಣ್ ಮಾಚಯ್ಯ ಹಾಗೂ ಇತರ ಗಣ್ಯರು ಸಮೀಪದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಪುತ್ಥಳಿಗಳಿಗೆ ಮಾಲಾರ್ಪಣೆ ನಡೆಸಿ ಗೌರವ ಸೂಚಿಸಿದರು. ಸಭೆಯಲ್ಲಿ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯ ಯೋಧರೂ ಆಗಮಿಸಿದ್ದರು. ಸಮಿತಿಯ ಪ್ರಮುಖರಾದ ದೇಯಂಡ ಜಯಚಂಗಪ್ಪ ಸ್ವಾಗತಿಸಿ, ಕೋಡಿಮಣಿಯಂಡ ತಂಗಮ್ಮ ವಂದಿಸಿದರು. ಪಂಚಮ್ ತ್ಯಾಗರಾಜ್ ಅವರಿಂದ ದೇಶಭಕ್ತಿ ಗೀತೆಗಳು ಮೊಳಗಿದವು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಜಿಲ್ಲಾ ವಕ್ತಾರ ಆಪಟ್ಟಿರ ಟಾಟೂ ಮೊಣ್ಣಪ್ಪ, ಮಾಜಿ ಜಿ.ಪಂ. ಸದಸ್ಯರಾದ ಎಸ್.ಎನ್. ರಾಜರಾವ್, ಪಿ.ಆರ್. ಪಂಕಜ ಸೇರಿದಂತೆ ಇನ್ನಿತರರು ಹಾಜರಿದ್ದರು.