ಕೂಡಿಗೆ. ಮಾ. ೨೩ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಮೂಲಕ ಹಾದು ಹೋಗಿರುವ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಮೇಲೆ ಅರಣ್ಯ ಇಲಾಖೆ ಮೀಸಲು ಅರಣ್ಯ ಪ್ರದೇಶ ಜಾಗವೆಂದು ಹದ್ದುಬಸ್ತು ಜಾಗಕ್ಕೆ ಗಡಿ ಕಲ್ಲು ಅಳವಡಿಕೆಗೆ ಮುಂದಾದಾಗ ನೀರಾವರಿ ಇಲಾಖೆಯ ಅಧಿಕಾರಿ ವರ್ಗ ತಡೆಯೊಡ್ಡಿದ ಘಟನೆ ಹುದುಗೂರು ಗ್ರಾಮದಲ್ಲಿ ನಡೆದಿದೆ.

ಮೈಸೂರು ವಿಭಾಗದ ಅರಣ್ಯ ಇಲಾಖೆ ಕಾರ್ಯಸೂಚಿಯಂತೆ ಯಡವನಾಡು ಮೀಸಲು ಅರಣ್ಯ ಪ್ರದೇಶದ ಹುದುಗೂರು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ನೀರಾವರಿ ಇಲಾಖೆಯ ಗಮನಕ್ಕೆ ತಾರದೆ ಬ್ರಿಟಿಷ್ ಸರ್ಕಾರ ನಕ್ಷೆಯನ್ನು ಗುರುತಿಸಿಕೊಂಡು ಗಡಿ ಕಲ್ಲು ಅಳವಡಿಕೆಗೆ ಮುಂದಾಗಿತ್ತು. ತಕ್ಷಣ ಸ್ಥಳೀಯರು ನೀರಾವರಿ ಇಲಾಖೆ ಗಮನಕ್ಕೆ ತಂದ ಹಿನ್ನೆಲೆ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಇಂಜಿನಿಯರ್ ಸಿದ್ದರಾಜಶೆಟ್ಟಿ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದಾಗ ಕೆಲಸವನ್ನು ಸ್ಥಗಿತಗೊಳಿಸಲಾಯಿತು.

ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯು ನಿರ್ಮಾಣಗೊಂಡು ಈಗಾಗಲೇ ೫೫ ವರ್ಷಗಳು ಕಳೆದಿವೆ, ಆಗಿನ ಕಾಲದಲ್ಲಿ ನೀರಾವರಿ ಇಲಾಖೆಯ ಮೂಲಕ ನಾಲೆಯ ಸರ್ವೆ ನಡೆಸಿ ಅದರ ಮುಖೇನ ನಾಲೆ ಹದ್ದುಬಸ್ತ್ ಅನ್ನು ಗುರುತಿಸಿ ಅದರ ಪ್ರಕಾರವಾಗಿ ಹಾರಂಗಿಯ ಮುಖ್ಯ ನಾಲೆಯ ಕಾಮಗಾರಿಯು ನಡೆದಿದೆ. ಮುಖ್ಯ ನಾಲೆಯ ಎರಡೂ ಬದಿಗಳಲ್ಲಿ ನಾಲೆಗೆ ಸೇರಿದ ಜಾಗವನ್ನು ಗುರುತಿಸಿ ಅದರ ಮೂಲಕ ನಾಲೆಯ ಮೇಲೆ ರಸ್ತೆಯ ನಿರ್ಮಾಣವು ಸಹ ನಡೆದಿದೆ.

ಆದರೆ ೫೫ ವರ್ಷಗಳ ನಂತರ ಅರಣ್ಯ ಇಲಾಖೆಯವರು ಗಡಿ ಪ್ರದೇಶದ ಗುರುತಿಸುವಿಕೆಯಲ್ಲಿ ಹಾರಂಗಿಯ ಮುಖ್ಯ ನಾಲೆ ಅಂಚಿನಲ್ಲಿ ಗಡಿ ಕಲ್ಲನ್ನು ನೆಡಲು ಮುಂದಾದಾಗ ನೀರಾವರಿ ಇಲಾಖೆಯವರು ಸಂಬAಧಿಸಿದ ಅರಣ್ಯ ಇಲಾಖೆಗೆ ಈ ಜಾಗವು ನೀರಾವರಿ ಇಲಾಖೆಗೆ ಸೇರಿದ ಜಾಗ ಎಂದು ತಿಳುವಳಿಕೆಯ ಪತ್ರವನ್ನು ನೀಡಿದೆ. ಈ ಸಂದರ್ಭದಲ್ಲಿ ಹಾರಂಗಿ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಇಂಜಿನಿಯರ್ ಸಿದ್ದರಾಜಶೆಟ್ಟಿ, ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಸತೀಶ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಗಣೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

-ಕೆ.ಕೆ. ನಾಗರಾಜಶೆಟ್ಟಿ.