ಕುಶಾಲನಗರ, ಮಾ. ೨೩: ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಮತ್ತು ಕುಶಾಲನಗರ ತಾಲೂಕು ಘಟಕ ಹಾಗೂ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ರಥೋತ್ಸವ ಪ್ರಯುಕ್ತ ತಾ. ೨೯ ರಿಂದ ೨ ದಿನಗಳ ಕಾಲ ‘ಹಳ್ಳಿ- ಹಬ್ಬ' ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕಿ ವನಿತಾ ಚಂದ್ರಮೋಹನ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದ್ದು, ತಾ. ೨೯ ರಂದು ಕಣಿವೆ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ಮತ್ತು ಜಾನಪದ ಪರಿಷತ್ ಸದಸ್ಯರು ಹಾಗೂ ಕುಟುಂಬ ಸದಸ್ಯರಿಗೆ ಗ್ರಾಮೀಣ ಕ್ರೀಡಾಕೂಟ ಏರ್ಪಡಿಸಲಾಗಿದೆ. ಹಳ್ಳಿ ಆಟಗಳಾದ ಕುಂಟೆ ಬಿಲ್ಲೆ, ಗೋಣಿ ಚೀಲದಲ್ಲಿ ಓಟ, ಎರಡು ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಕಾಯಿ ಒಡೆಯುವುದು, ಬುಗುರಿ ಆಟ, ಕಪ್ಪೆ ಓಟ, ಕೆರೆ ದಡ ಆಟ, ಹಗ್ಗ ಜಗ್ಗಾಟ, ಕಣಿವೆ ಗ್ರಾಮದ ಮುಖ್ಯ ರಸ್ತೆಯ ಮನೆ ಮನೆಯಲ್ಲಿ ರಂಗೋಲಿ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ತಾ. ೩೦ ರಂದು ಸಂಜೆ ದೇವಾಲಯ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಜಾನಪದ ಗೀತೆ, ಕೋಲಾಟ, ಜಾನಪದ ನೃತ್ಯ, ಭಜನೆ ಗೀತೆ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ. ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ತಾ. ೨೭ ರೊಳಗಾಗಿ ಮೊಬೈಲ್ ಸಂಖ್ಯೆ ೮೨೯೬೭೮೮೮೭೫ ಸಂಪರ್ಕಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳುವAತೆ ವನಿತಾ ಚಂದ್ರಮೋಹನ್ ಪ್ರಕಟಣೆಯಲ್ಲಿ ಕೋರಿದ್ದಾರೆ.