ನಾಪೋಕ್ಲು, ಮಾ. ೨೪: ಸಮಾಜದಲ್ಲಿ ಉಂಟಾದ ಅಂತರವನ್ನು ಒಂದುಗೂಡಿಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅಭಿಪ್ರಾಯ ಪಟ್ಟರು. ನಾಪೋಕ್ಲು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾದ ಮೂರು ದಿನದ ಹಿಂದೂ ಚಾಂಪಿಯನ್ ಟ್ರೋಫಿ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ತೊಡಕಿನ ನಡುವೆ ಜಿಲ್ಲೆಯಲ್ಲಿ ಅನೇಕ ಕ್ರೀಡಾಕೂಟಗಳು ನಡೆಯುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಕ್ರೀಡಾಕೂಟಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇರುವುದು ಬೇಸರದ ಸಂಗತಿ. ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಸಹಕಾರಿಯಾಗುವಂತೆ ಹೋಬಳಿ ಮಟ್ಟದಲ್ಲಿ ಒಂದರAತೆ ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಬೇಕೆಂದರು.
ಎಲ್ಲದಕ್ಕೂ ಸರಕಾರವನ್ನು ಅವಲಂಬಿಸುವುದು ಸರಿಯಲ್ಲ. ಉದ್ಯಮಿಗಳ, ದಾನಿಗಳ ಸಹಕಾರ ದಿಂದ ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಿಸಿದರು. ಕಾರ್ಯಕ್ರಮದಲ್ಲಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿದರು.