ಮಡಿಕೇರಿ, ಮಾ. ೨೩ : ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗೌಡ ಜನಾಂಗದ ನಡುವೆ ವರ್ಷಂಪ್ರತಿ ಏರ್ಪಡಿಸಿಕೊಂಡು ಬರಲಾಗುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಹಬ್ಬ ಏ.೧೫ರಿಂದ ಹತ್ತು ದಿನಗಳ ಕಾಲ ಭಾಗಮಂಡಲ ಸನಿಹದ ಚೆಟ್ಟಿಮಾನಿಯ ಕೆದಂಬಾಡಿ ಐನ್‌ಮನೆ ಮೈದಾನದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೀರ್ತಿಕುಮಾರ್; ಕಳೆದ ಕೆಲವು ವರ್ಷಗಳಿಂದ ಪ್ರಕೃತಿ ವಿಕೋಪ, ಕೊರೊನಾದಿಂದಾಗಿ ಪಂದ್ಯಾವಳಿ ಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಮತ್ತೆ ಪುನರಾರಂಭಿಸಿದ್ದು, ಇದು ೨೭ನೇ ವರ್ಷದ ಕ್ರಿಕೆಟ್ ಹಬ್ಬವಾಗಿದೆ. ಈಗಾಗಲೇ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ಏಪ್ರಿಲ್ ೧೫ರಿಂದ ಹತ್ತು ದಿನಗಳ ಕಾಲ ಕೆದಂಬಾಡಿ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಈ ಹಿಂದೆ ೨೦೧೯ರಲ್ಲಿ ನಡೆದ ಈ ಕ್ರಿಕೆಟ್ ಹಬ್ಬದಲ್ಲಿ ೯೦ ತಂಡಗಳು ಭಾಗವಹಿಸಿದ್ದವು. ನಾಲ್ಕು ವರ್ಷಗಳ ಬಳಿಕ ಮತ್ತೆ ಪ್ರಾರಂಭಿಸಿದ್ದು, ಈ ಬಾರಿ ೮೦ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಭಾಗವಹಿಸುವ ತಂಡಗಳು ನೋಂದಾಯಿಸಿಕೊಳ್ಳಲು ಏಪ್ರಿಲ್ ೫ ಕೊನೆಯ ದಿನವಾಗಿದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಶೋಧನ್ (೮೨೭೭೭೭೯೯೫೪), ಭರತ್ (೯೭೪೦೭೮೨೪೪೪), ಕೃಷ್ಣ (೯೪೮೧೭೦೧೦೩೨), ನಿತಿನ್ (೮೦೮೮೫೩೬೧೧೭) ಇವರುಗಳನ್ನು ಸಂಪರ್ಕಿಸಬಹುದಾಗಿದೆ. ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅರೆಭಾಷಿಕ ಗೌಡ ಜನಾಂಗದವರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಆಟಗಾರರ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ ಎಂದು ಅವರು ಹೇಳಿದರು. ಮೊದಲ ನಾಕೌಟ್ ಹಂತದ ಪಂದ್ಯಾಟಗಳು ಆರು ಓವರ್‌ಗಳಿಗೆ ಸೀಮಿತವಾಗಿರಲಿದ್ದು, ಪ್ರಿಕ್ವಾರ್ಟರ್ ಬಳಿಕ ೮ ಓವರ್‌ಗಳದ್ದಾಗಿರುತ್ತದೆ. ಅಂತಿಮ ಪಂದ್ಯಾಟವು ೧೨ ಓವರ್‌ನದ್ದಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕ್ರಿಕೆಟ್ ಕ್ಲಬ್‌ನ ಕಾರ್ಯದರ್ಶಿ ನಿತಿನ್, ಖಜಾಂಚಿ ಶೋಧನ್, ಸದಸ್ಯರುಗಳಾದ ವರದರಾಜ್, ಪುಷಾನ್ ಇದ್ದರು.