ಸೋಮವಾರಪೇಟೆ, ಮಾ.೨೪ : ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ೫ ನೇ ವರ್ಷದ ಮುಕ್ತ ‘ಹಿಂದೂ ಕಪ್’ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಗೌಡಳ್ಳಿ ಗೋಲ್ಡನ್ಗೈಸ್ ತಂಡವು ೧.೫೦ ಲಕ್ಷ ನಗದಿನೊಂದಿಗೆ ಆಕರ್ಷಕ ಟ್ರೋಫಿ ಸಹಿತ ಪ್ರಥಮ ಸ್ಥಾನಕ್ಕೆ ಭಾಜನವಾಯಿತು.
ಫೈನಲ್ನಲ್ಲಿ ಎಡವಿದ ಕೂಗೂರು ಗೆಳೆಯರ ಬಳಗ ತಂಡ ೭೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಹೈವೋಲ್ಟೇಜ್ನಂತೆ ನಡೆದ ಫೈನಲ್ ಪಂದ್ಯಾಟದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವಾದರೂ ಯಾವೊಂದು ತಂಡವೂ ಫೀಲ್ಡ್ ಗೋಲ್ ಬಾರಿಸಲು ಸಾಧ್ಯವಾಗಲಿಲ್ಲ. ನಂತರ ನಡೆದ ಪೆನಾಲ್ಟಿ ಶೂಟೌಟ್ನಲ್ಲಿ ಗೋಲ್ಡನ್ಗೈಸ್ ತಂಡವು ೩ ಗೋಲು ಗಳಿಸಿದರೆ, ಕೂಗೂರು ತಂಡವು ೨ ಗೋಲು ಗಳಿಸಲಷ್ಟೇ ಸಾಧ್ಯವಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮೊದಲು ನಡೆದ ರೋಚಕ ಮೊದಲ ಸೇಮಿಸ್ನಲ್ಲಿ ಗೆಳೆಯರ ಬಳಗವು ಟೀಮ್ ಶುಂಠಿ ಬಿ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ೨-೦ ಗೋಲುಗಳಿಂದ ಸೋಲಿಸಿತು. ಎರಡನೇ ಸೆಮಿಫೈನಲ್ನಲ್ಲಿ ಗೋಲ್ಡನ್ಗೈಸ್ ತಂಡ, ಬೀಟಿಕಟ್ಟೆ ನೀಲ್ಶಾಂತ್ ಬಾಯ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ೨-೧ ಗೋಲುಗಳಿಂದ ಮಣಿಸಿತು.
(ಮೊದಲ ಪುಟದಿಂದ) ಉದ್ಯಮಿ ಚಾಮೇರ ಪವನ್ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ೧೬ ತಂಡಗಳು ಪಾಲ್ಗೊಂಡಿದ್ದವು. ರಾಷ್ಟಿçÃಯ ಹಾಗೂ ಅಂತಾರಾಷ್ಟಿçÃಯ ಮಟ್ಟದ ಫುಟ್ಬಾಲ್ ಆಟಗಾರರು ಮೈದಾನದಲ್ಲಿ ಆಟವಾಡಿ ಕ್ರೀಡಾಪ್ರೇಮಿಗಳ ಗಮನ ಸೆಳೆದರು.
ಗ್ರಾಮೀಣ ಭಾಗದ ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯುಗಾದಿಯೊಂದಿಗೆ ಫುಟ್ಬಾಲ್ ಹಬ್ಬವನ್ನು ಸವಿದರು. ಗ್ರಾಮೀಣ ಭಾಗದ ಮೈದಾನದಲ್ಲಿ ವಿದೇಶಿ ಆಟಗಾರರ ಆಟವನ್ನು ನೋಡಿ ಮಕ್ಕಳಾದಿಯಾಗಿ ಎಲ್ಲರೂ ಸಂಭ್ರಮಿಸಿ, ಆಯೋಜಕರನ್ನು ಪ್ರಶಂಸಿದರು.
ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಉದ್ಯಮಿಗಳಾದ ಗಿರೀಶ್ ಮಲ್ಲಪ್ಪ, ಕೋಟೆಯೂರಿನ ಎಂ.ಎಲ್. ಸಂತೋಷ್, ದೀಣೆಕೊಪ್ಪ ಸೋಮಶೇಖರ್, ಪಿ.ಕೆ. ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಜಿ.ಮಲ್ಲಿಕಾ, ಪ್ರಮುಖರಾದ ಎಸ್.ಬಿ. ಭರತ್ಕುಮಾರ್, ಎಚ್.ಪಿ.ಸುರೇಶ್, ಎಸ್.ಎ.ಸುರೇಶ್, ಪಿ.ಕೆ.ರವಿ, ಚಕ್ರವರ್ತಿ ಸುರೇಶ್, ಬಿ.ಎಸ್.ಸುಂದರ್, ಬಳಗದ ಅಧ್ಯಕ್ಷ ಎಚ್.ಎಂ. ಜಿತೇಂದ್ರ, ಕಾರ್ಯದರ್ಶಿ ಅಜ್ಜಳ್ಳಿ ನವೀನ್, ಜಿ.ಪಿ.ಸುನಿಲ್, ಪ್ರಸನ್ನ ಮತ್ತು ಪದಾಧಿಕಾರಿಗಳು ಇದ್ದರು.