ಸೋಮವಾರಪೇಟೆ, ಮಾ. ೨೧: ತುರ್ತು ಹಾಗೂ ಆಪತ್ಕಾಲದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ನೆರವು ಪಡೆಯಬಹುದೆಂದು ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್ ತಿಳಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಅಪಘಾತ ಮುಂತಾದ ತುರ್ತು ಹಾಗೂ ಆಪತ್ಕಾಲದಲ್ಲಿ ತೊಂದರೆಗೆ ಒಳಗಾದವರ ನೆರವಿಗೆ ಧಾವಿಸಬೇಕೆಂಬ ಸದಾಶಯದಿಂದ ಶ್ರೀ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಶೌರ್ಯ ವಿಪತ್ತು ನಿರ್ವಹಣಾ ತಂಡವನ್ನು ರಚಿಸಿ ತರಬೇತಿಗೊಳಿಸಿದ್ದಾರೆ. ಇದರಲ್ಲಿ ಈಜುಗಾರ, ಮರ ಹತ್ತುವವರು, ಚಾಲಕರು ಸೇರಿದಂತೆ ಇನ್ನಿತರ ಪರಿಣಿತರು ಇದ್ದಾರೆ ಎಂದು ತಿಳಿಸಿದರು.

ಅಗತ್ಯ ಸಂದರ್ಭ ತಂಡದ ಮುಖ್ಯಸ್ಥ ರಾಮದಾಸ್ ಅವರನ್ನು (ಮೊ. ೯೬೩೨೧೦೨೧೨೪) ಸಂಪರ್ಕಿಸಬಹುದು ಎಂದರು.

ಈ ಸಂದರ್ಭ ಶಸ್ತ್ರ ಚಿಕಿತ್ಸಕ ಡಾ. ಸತೀಶ್ ಮಾತನಾಡಿ, ಕೋವಿಡ್ ಸಂದರ್ಭ ಗಮನಾರ್ಹ ಸೇವೆ ಸಲ್ಲಿಸಿರುವ ಬಗ್ಗೆ ಸ್ಮರಿಸಿಕೊಂಡ ಅವರು ಅಗತ್ಯ ಸಂದರ್ಭದಲ್ಲಿ ಆಸ್ಪತ್ರೆ ಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ನಂತರ ತಹಶೀಲ್ದಾರ್ ಎಸ್.ಎನ್. ನರಗುಂದ, ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಶೌರ್ಯ ತಂಡವನ್ನು ಪರಿಚಯಿಸಿ ಮಾಹಿತಿ ನೀಡಲಾಯಿತು.