ವೀರಾಜಪೇಟೆ, ಮಾ. ೨೧: ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಗೂ ವಿವಿಧ ತೆರಿಗೆಯನ್ನು ಶೇ. ೩ಕ್ಕೆ ಏರಿಸಲು ವಿರೋಧ ಪಕ್ಷಗಳ ವಿರೋಧದ ನಡುವೆ ಪುರಸಭೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ವೀರಾಜಪೇಟೆ ಪುರಸಭೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಶೇ. ೩ ರಷ್ಟು ಏರಿಕೆ ಮಾಡುತ್ತಿರುವ ವಿಚಾರ ಸರಿಯಲ್ಲ ಎಂದು ಪ್ರತಿಪಕ್ಷದವರು, ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿ ಕೋಲಾಹಲ ಎಬ್ಬಿಸಿದರು.

ಪ್ರತಿಪಕ್ಷದ ಸದಸ್ಯ ಪ್ರಥ್ವಿನಾಥ್ ಆರಂಭದಲ್ಲಿ ಮಾತನಾಡಿ ಜನ ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಆಡಳಿತ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದೆ. ನಿರೀಕ್ಷಿತ ಅಭಿವೃದ್ಧಿ ಇಲ್ಲ ಹೀಗಿರುವಾಗ ದರ ಏರಿಕೆ ಸಮಂಜಸವಲ್ಲ, ನಮ್ಮ ವಿರೋಧವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಪಕ್ಷದ ಸದಸ್ಯ ಪಟ್ಟಡ ರಂಜಿ ಪೂಣ್ಣಚ್ಚ ಮಾತನಾಡಿ ಪಟ್ಟಣದಲ್ಲಿ ತಿಂಗಳಿಗೆ ೧೫ ದಿನ ಮಾತ್ರ ನೀರು ಬರುತ್ತದೆ. ಆದರೆ ಜನ ದಿನಕ್ಕೆ ಹತ್ತು ರೂ ತೆರಿಗೆ ನೀಡುತ್ತಿದ್ದಾರೆ, ಶುಚಿತ್ವ ಇಲ್ಲ ಚರಂಡಿಗಳು ಕೊಳೆತು ನಾರುತ್ತಿವೆೆ. ನಿಮ್ಮ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ನಿಮಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ನಿರ್ಗಮಿಸಿ ನಾವು ಆಡಳಿತ ನಡೆಸಿ ತೋರಿಸುತ್ತೇವೆ ಎಂದರು. ಈ ಹೇಳಿಕೆ ಪ್ರತಿಪಕ್ಷಗಳ ಮತ್ತು ಆಡಳಿತರೂಢ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಸಭೆ ಗೊಂದಲದ ಗೂಡಾಯಿತು.

ಮುಖ್ಯಾಧಿಕಾರಿ ಎ. ಚಂದ್ರಕುಮಾರ್ ಸರಕಾರದ ಆದೇಶದಂತೆ ತೆರಿಗೆ ಪರಿಷ್ಕರಣೆ ಮಾಡಲೇಬೇಕು, ಹಾಗಾಗಿ ನಾವು ಸಭೆ ಕರೆದಿದ್ದೇವೆ ಎಂದರು. ಪ್ರತಿಪಕ್ಷ ಸಮ್ಮತ್ತಿಸಲಿಲ್ಲ. ಒಂದು ಹಂತದಲ್ಲಿ ಹಂಗಾಮಿ ಅಧ್ಯಕ್ಷೆ ಆಶಾ ಸುಬ್ಬಯ್ಯ ನೀರು ಪೂರೈಕೆಯ ವೈಫಲ್ಯವನ್ನು ಒಪ್ಪಿಕೊಂಡು ಮುಂದೆ ಅಮೃತ ಯೋಜನೆಯಲ್ಲಿನ ೬೦ ಕೋಟಿಯ ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿಯಾದರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಪ್ರತಿಪಕ್ಷದ ಸದಸ್ಯ ಮತೀನ್, ಪಕ್ಷೇತರ ಸದಸ್ಯೆ ದೇಚಮ್ಮ ಮಾತನಾಡಿ ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ

(ಮೊದಲ ಪುಟದಿಂದ) ಅಧ್ಯಕ್ಷ ಸ್ಥಾನದಲ್ಲಿದ್ದ ಆಶಾ ಸುಬ್ಬಯ್ಯ ದರ ಏರಿಕೆ ನಿರ್ಧಾರ ಪ್ರಕಟಿಸಿದಾಗ ವಿಪಕ್ಷ ಸದಸ್ಯರು ಅಧ್ಯಕ್ಷರ ಪೀಠದ ಎದುರು ಬಂದು ಪ್ರತಿಭಟಿಸಿ ಧಿಕ್ಕಾರ ಕೂಗಿದರು.

ಆಡಳಿತ ಪಕ್ಷದ ಸಚಿನ್ ಕುಟ್ಟಯ್ಯ ಮತ್ತು ಜೂನಾ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ತೆರಿಗೆ ಹೆಚ್ಚಳ ಸರಿ ಎಂದರು. ಸಭೆಯಲ್ಲಿ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.

ಸಭೆಯ ಬಳಿಕ ಮಾತನಾಡಿದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ರಂಜಿ ಪೂಣಚ್ಚ, ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪುರಸಭೆ ವಿಫಲವಾಗಿದೆ. ಹೀಗಿರುವಾಗ ತೆರಿಗೆ ಹೆಚ್ಚಳ ಸೂಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ತಾ. ೨೩ ರಂದು ೧೧ ಗಂಟೆಗೆ ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ಆಡಳಿತಾರೂಢ ಬಿಜೆಪಿ ಸದಸ್ಯರಾದ ಜೂನಾ, ನಾಮ ನಿರ್ದೇಶಿತ ಸದಸ್ಯರಾದ ಸಚಿನ್ ಕುಟ್ಟಯ್ಯ, ತಸ್ಲಿಂ ಅಕ್ತರ್ ಮಾತನಾಡಿ ಕಾಂಗ್ರೆಸ್ ಸದಸ್ಯರಿಗೆ ಪಟ್ಟಣದ ಅಭಿವೃದ್ಧಿ ಬೇಕಾಗಿಲ್ಲ. ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾ ಸಭೆಯಲ್ಲಿ ಗೊಂದಲ, ಗದ್ದಲ ಸೃಷ್ಟಿ ಮಾಡುತ್ತಾರೆ ಎಂದು ಆರೋಪಿಸಿದರು.