ಮಡಿಕೇರಿ, ಮಾ. ೨೧: ಮಡಿಕೇರಿಯ ಪ್ರಮುಖ ಪ್ರವಾಸಿ ತಾಣವಾಗಿರುವ ರಾಜಾಸೀಟಿನ ಅಭಿವೃದ್ಧಿಗಾಗಿ ಕೈಗೊಳ್ಳಲಾಗಿರುವ ಗ್ರೇಟರ್ ರಾಜಾಸೀಟ್ ಕಾಮಗಾರಿಗೆ ಬಿಡುಗಡೆ ಯಾದ ಹಣದಲ್ಲಿ ದುರುಪಯೋಗ ವಾಗಿದ್ದು, ಈ ಸಂಬAಧ ಸಂಬAಧಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರರ ವಿರುದ್ಧ ಕರ್ನಾಟಕ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿಚಾರ ತಿಳಿಸಿದ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಅವರು; ಗ್ರೇಟರ್ ರಾಜಾಸೀಟ್ ಕಾಮಗಾರಿಗೆ ೨೦೧೬-೧೭ರಲ್ಲಿ ರೂ.೪.೫೫ ಕೋಟಿ ಹಣ ಬಿಡುಗಡೆಯಾಗಿದ್ದು, ಲೊಕೋಪಯೋಗಿ ಇಲಾಖೆಗೆ ಉಸ್ತುವಾರಿ ನೀಡಲಾಗಿದೆ. ಸುಧಾಕರ್ ದಾಸ್ ಶೆಟ್ಟಿ ಎಂಬವರಿಗೆ ಗುತ್ತಿಗೆ ನೀಡಲಾಗಿದ್ದು, ೩೦-೬-೨೦೨೦ರಲ್ಲಿ ಕಾಮಗಾರಿ ಆರಂಭಗೊAಡಿತು. ಇದೀಗ ಕಾಮಗಾರಿ ಪೂರ್ಣಗೊಂಡು ಇತ್ತೀಚೆಗೆ ರಾಜ್ಯದ ಮುಖ್ಯ ಮಂತ್ರಿಗಳು ಉದ್ಘಾಟನೆ ಕೂಡ ನೆರವೇರಿಸಿದ್ದಾರೆ. ಆದರೆ; ಬೇಕಾಬಿಟ್ಟಿ ನಡೆದ ಕಾಮಗಾರಿಯಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ಸಂಶಯವಿದ್ದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಮೂಲಕ ಮಾಹಿತಿ ಕಲೆ ಹಾಕಿದ ಸಂದರ್ಭ ಒಟ್ಟು ಒಂದು ಕೋಟಿ ೫೮ಲಕ್ಷದ ೪೩ ಸಾವಿರದ ೧೩೬ ರೂಪಾಯಿಗಳಷ್ಟು ಹಣವನ್ನು ಅನಧಿಕೃತವಾಗಿ ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿರುವದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಕಾಮಗಾರಿಗೆ ಸಂಬAಧಿಸಿದAತೆ ನಿರ್ವಹಣೆ ಮಾಡಲಾಗುತ್ತಿರುವ ಎಂಬಿ ಪುಸ್ತಕ ಸಂಖ್ಯೆ ೧೨೦೮೬ರಲ್ಲಿ ಎಸ್‌ಬಿಆರ್ ಸಂಖ್ಯೆ ೩೦೪ರಲ್ಲಿ ತಾ.೧೫.೧೧.೨೦ರಂದು ರೂ.೩೬,೭೧,೧೦೯, ಎಸ್‌ಬಿಆರ್ ಸಂಖ್ಯೆ ೩೯೯ರಲಲ್ಲಿ ತಾ. ೫.೨.೨೦೨೧ರಂದು ರೂ.೭೦,೧೪,೮೬೩ ಹಾಗೂ ಎಸ್‌ಬಿಆರ್ ಸಂಖ್ಯೆ ೧೧೭೦ರಲ್ಲಿ ತಾ.೧೨.೧೨.೨೦೨೧ರಂದು ರೂ. ೫೧,೪೬,೦೬೪ ಹಣವನ್ನು ಡ್ರಾ ಮಾಡಲಾಗಿದೆ. ಯಾವದೇ ಕಾಮಗಾರಿ ನಡೆಯುವ ಮುನ್ನ ಅನಧಿಕೃತವಾಗಿ ಹಣ ಡ್ರಾ ಮಾಡಲಾಗಿದೆ. ಈ ಎಲ್ಲ ಬಿಲ್‌ಗಳಿಗೂ ಎಂಬಿ ಪುಸ್ತಕ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಲ್. ದೇವರಾಜು ಸಹಿ ಮಾಡಿದ್ದಾರೆ. ಹಾಗಾಗಿ ಹಣ ದುರುಪಯೋಗದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವದಾಗಿ ಮೈನಾ ತಿಳಿಸಿದರು.

ಶಾಸಕರು ಹೊಣೆ

ಹಣ ದುರುಪಯೋಗದ ಆರೋಪ ಹೊತ್ತಿರುವ ಅಭಿಯಂತರ ದೇವರಾಜು ಅವರ ಮೇಲೆ ಈ ಹಿಂದೆಯೂ ಹಲವಾರು ದುರುಪಯೋಗದ ಪ್ರಕರಣಗಳು ದಾಖಲಾಗಿದ್ದು, ದಂಡನೆಗೆ ಒಳಗಾಗಿದ್ದರೂ ಕಳೆದ ಹತ್ತು ವರ್ಷಗಳಿಂದಲೂ ಇಲ್ಲಿಯೇ ಕರ್ತವ್ಯದಲ್ಲಿದ್ದಾರೆ. ಜಿ.ಪಂ., ತಾ.ಪಂ. ಆಡಳಿತ ಮೊಟಕುಗೊಂಡ ಬಳಿಕ ಭ್ರಷ್ಟಾಚಾರ ಹೆಚ್ಚಾಗಿದ್ದು, ಕೇಳುವವರು ಯಾರೂ ಇಲ್ಲದಂತಾಗಿದೆ. ಪ್ರಶ್ನೆ ಮಾಡಬೇಕಾದ ಶಾಸಕರುಗಳು ಮೌನವಾಗಿದ್ದಾರೆ. ಇಂತಹ ಪ್ರಕರಣಗಳಿಗೆ ಶಾಸಕರುಗಳೇ ಹೊಣೆಗಾರರಾಗಲಿದ್ದು, ಇನ್ನಾದರೂ ಮುತುವರ್ಜಿ ವಹಿಸಿ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ, ದುರುಪಯೋಗವಾಗಿರುವ ಸಾರ್ವಜನಿಕ ತೆರಿಗೆ ಹಣವನ್ನು ವಸೂಲಾತಿ ಮಾಡಬೇಕಿದೆ. ಇಲ್ಲವಾದಲ್ಲಿ ಶಾಸಕರುಗಳೂ ಇದರಲ್ಲಿ ಭಾಗಿಯಾಗಿದ್ದಾರೆಂಬ ಸಂಶಯ ಮೂಡಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಡಿಕೇರಿ ನಗರಸಭಾ ಮಾಜಿ ಆಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಉಪಾಧ್ಯಕ್ಷ ಟಿ.ಎಂ.ಅಯ್ಯಪ್ಪ, ಡಿಸಿಸಿ ಸದಸ್ಯರುಗಳಾದ ಅಬ್ದುಲ್ ರಜಾಕ್, ಪ್ರಕಾಶ್ ಆಚಾರ್ಯ, ಟಿ.ಹೆಚ್. ಉದಯಕುಮಾರ್ ಇದ್ದರು.