ನಟ ಚೇತನ್ ಅಹಿಂಸಾಗೆ ೧೪ ದಿನ ಬಂಧನ

ಬೆAಗಳೂರು, ಮಾ. ೨೧: ಹಿಂದೂ ಧರ್ಮ, ಸಾಹಿತ್ಯ ಇತ್ಯಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ನಟ ಚೇತನ್ ಅಹಿಂಸ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದರು ಎಂದು ಶಿವಕುಮಾರ್ ಎಂಬವರು ನೀಡಿದ ದೂರಿನಡಿ ನಟ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಅಮೃತ್ ಪಾಲ್ ಬಿಟ್ಟು ಬೇರೆಲ್ಲರನ್ನು ಬಂಧಿಸಿದ್ದು ಹೇಗೆ?: ನ್ಯಾಯಲಯ ಪ್ರಶ್ನೆ

ಚಂಡೀಗಢ, ಮಾ. ೨೧: ಅಮೃತ್ ಪಾಲ್ ಸಿಂಗ್ ಬಂಧನದ ವಿಚಾರವಾಗಿ ಪಂಜಾಬ್ ಹಾಗೂ ಹರ್ಯಾಣ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಅಮೃತ್ ಪಾಲ್ ಸಿಂಗ್ ಹೊರತುಪಡಿಸಿ ಎಲ್ಲರೂ ಬಂಧನಕ್ಕೊಳಗಾಗಿರುವುದು ಹೇಗೆ ಎಂದು ಪ್ರಶ್ನಿಸಿದೆ. ಅಮೃತ್ ಪಾಲ್ ಸಿಂಗ್ ತಪ್ಪಿಸಿಕೊಂಡಿದ್ದರೆ, ಅದು ಗುಪ್ತಚರ ವೈಫಲ್ಯ ಎಂದು ಕೋರ್ಟ್ ಹೇಳಿದೆ. ಅಡ್ವೊಕೇಟ್ ಇಮಾನ್ ಸಿಂಗ್ ಖಾರ ಅವರು ಅಮೃತ್ ಪಾಲ್ ಸಿಂಗ್ ಅವರನ್ನು ಪೊಲೀಸ್ ಕಸ್ಟಡಿಯಿಂದ ಬಿಡಿಸಬೇಕೆಂದು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಇಡೀ ಕಾರ್ಯಾಚರಣೆಯನ್ನು ಯೋಜನಾಬದ್ಧವಾಗಿ ನಡೆಸಿದ್ದರೂ ಅಮೃತ್ ಪಾಲ್ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ, ಒಂದು ವೇಳೆ ತಪ್ಪಿಸಿಕೊಂಡಿದ್ದರೆ ಅದು ಗುಪ್ತಚರ ವೈಫಲ್ಯ ಎಂದು ನ್ಯಾ. ಎನ್.ಎಸ್. ಶೇಖಾವತ್ ಎ.ಜಿ. ವಿನೋದ್ ಘಾಯ್ ಹೇಳಿದ್ದಾರೆ. ನಾವು ಇತರ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಎಜಿ ಹೇಳಿದ್ದಕ್ಕೆ ನಿಮ್ಮಲ್ಲಿ ೮೦,೦೦೦ ಪೊಲೀಸರಿದ್ದಾರೆ... ಅಮೃತ್ ಪಾಲ್ ಬಿಟ್ಟು ಬೇರೆಲ್ಲರೂ ಬಂಧಿತರಾಗಿದ್ದು ಹೇಗೆ? ಎಂದು ಕೋರ್ಟ್ ಪ್ರಶ್ನಿಸಿದೆ.

ಮಾಜಿ ಸಿಎಂ ನಿವಾಸ ಮುಂದೆ ಹೈಡ್ರಾಮಾ, ಆತ್ಮಹತ್ಯೆ ಎಚ್ಚರಿಕೆ

ಬೆಂಗಳೂರು, ಮಾ. ೨೧: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕ್ಷೇತ್ರ ಆಯ್ಕೆ ಗೊಂದಲ ಮುಂದುವರಿದಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದು ಈ ಬಾರಿ ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಆರಂಭದಲ್ಲಿಯೇ ಹೇಳಿದ್ದರು. ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೋಗಿ ಅಲ್ಲಿ ಘೋಷಣೆ ಮಾಡಿ ಸರ್ವೆ ಮಾಡಿಸಿ ಅಲ್ಲಿನ ಚುನಾವಣಾ ವಾತಾವರಣ ತಮಗೆ ಅನುಕೂಲವಾಗಿಲ್ಲ ಎಂದು ಹಿಂದೆ ಸರಿಯುತ್ತಿದ್ದಾರೆ. ತಮ್ಮ ಸ್ಪರ್ಧೆ ಹೈಕಮಾಂಡ್‌ಗೆ ಬಿಟ್ಟ ವಿಚಾರ, ಹೈಕಮಾಂಡ್ ಹೇಳಿದಲ್ಲಿ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ಆದರೆ ಬೆಂಗಳೂರಿನ ಅವರ ಸರ್ಕಾರಿ ನಿವಾಸದ ಮನೆ ಮುಂದೆ ರಾಜಕೀಯ ಹೈಡ್ರಾಮಾ ನಡೆದಿದ್ದು, ಕೋಲಾರ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶರ್ಟ್ ಬಿಚ್ಚಿ ಬಾರುಕೋಲಿನಿಂದ ಅಭಿಮಾನಿ ಹೊಡೆದುಕೊಂಡು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಹೈಕಮಾಂಡ್ ಎಲ್ಲಿ ಸ್ಪರ್ಧಿಸುವಂತೆ ಸೂಚಿಸುತ್ತದೋ ಅಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಹೈಕಮಾಂಡ್ ಬಳಿ ಕೇಳಿ ನಿಮಗೆ ತಿಳಿಸುತ್ತೇನೆ ಎಂದು ಕೋಲಾರದಿಂದ ಬಂದ ಅಭಿಮಾನಿಗಳಿಗೆ ಹೇಳಿದ್ದೇನೆ. ನನ್ನ ಕುಟುಂಬ ಸದಸ್ಯರು, ಹಿತೈಷಿಗಳ, ರಾಜಕೀಯ ಮುಖಂಡರ ಜೊತೆ ಕೂಡ ಚರ್ಚಿಸುತ್ತೇನೆ, ಕೋಲಾರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಿಸೋಡಿಯಾ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಿಬಿಐ

ನವದೆಹಲಿ, ಮಾ. ೨೧: ಅಬಕಾರಿ ಹಗರಣದ ಪ್ರಕರಣದ ಸಿಬಿಐ ತನಿಖೆಗೆ ಸಹಕರಿಸಿದ್ದೇನೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತಮ್ಮ ವಿರುದ್ಧ ಯಾವುದೇ ದೋಷಾರೋಪಣೆ ಪತ್ತೆಯಾಗಿಲ್ಲ ಎಂದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಹೇಳಿದ್ದಾರೆ. ಎಎಪಿ ನಾಯಕನ ಜಾಮೀನು ಅರ್ಜಿಯ ಕುರಿತು ಇತರೆ ದಾಖಲೆಗಳನ್ನು ಸಲ್ಲಿಸುವಾಗ ಸಿಸೋಡಿಯಾ ಅವರ ಪರ ವಕೀಲರು, ಅವರ ಕಸ್ಟಡಿ ವಿಚಾರಣೆ ಇನ್ನು ಮುಂದೆ ಅಗತ್ಯವಿಲ್ಲ ಮತ್ತು ಅವರು ಎಲ್ಲಿಗೋ ಹಾರಿ ಹೋಗುವ ಅಪಾಯವಿಲ್ಲ. ಇತರ ಇಬ್ಬರು ಸಾರ್ವಜನಿಕ ಸೇವಕರನ್ನು ಬಂಧಿಸಿಲ್ಲ. ಅವರ ವಿರುದ್ಧದ ಆರೋಪಗಳು ಗಂಭೀರವಾಗಿದೆ. ಅವರ ವಿರುದ್ಧ ಕಿಕ್‌ಬ್ಯಾಕ್ ಪಡೆದ ಯಾವುದೇ ಸಾಕ್ಷ್ಯ, ಪುರಾವೆಗಳಿಲ್ಲ ಮತ್ತು ಅಬಕಾರಿ ನೀತಿಯಲ್ಲಿನ ಬದಲಾವಣೆಯು ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ವಾದಿಸಿದರು. ಅಬಕಾರಿ ನೀತಿಯಲ್ಲಿನ ಬದಲಾವಣೆಯ ವಿಷಯವು ದೆಹಲಿ ಎಲ್‌ಜಿ ಮತ್ತು ಹಣಕಾಸು ಕಾರ್ಯದರ್ಶಿ ಇತರರಿಗೆ ಹೋಗಿದೆ. ಆಪಾದಿತ ಎಲ್ಲಾ ಅಪರಾಧ ಪ್ರಕರಣದಲ್ಲಿ ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಗೆ ಗುರಿಯಾಗುತ್ತವೆ ಮತ್ತು ಯಾವುದೇ ಹೆಚ್ಚಿನ ಸೆರೆವಾಸವನ್ನು ಸಮರ್ಥಿಸುವುದಿಲ್ಲ ಎಂದು ಸಿಸೋಡಿಯಾ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಿಬಿಐ, ಅವರು 'ಹಿಂದೆAದೂ ಕಂಡಿಲ್ಲದ' ೧೮ ಸಚಿವಾಲಯಗಳೊಂದಿಗೆ ವ್ಯವಹರಿಸಿದ್ದಾರೆ ಮತ್ತು ಅವರು ವಿಮಾನದಲ್ಲಿ ಹಾರುವ ಅಪಾಯವನ್ನು ಹೊಂದಿರದಿದ್ದರೂ, ಅವರು ಖಂಡಿತವಾಗಿಯೂ ಸಾಕ್ಷ್ಯ ನಾಶದ ಅಪಾಯವನ್ನು ಹೊಂದಿರುತ್ತಾರೆ ಎಂದು ಹೇಳಿತು. ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಏಪ್ರಿಲ್ ೩ ರವರೆಗೆ ವಿಸ್ತರಿಸಿತು.

ಕಚೇರಿಯಲ್ಲಿ ಒಸಾಮಾ ಬಿನ್ ಲಾಡೆನ್ ಫೋಟೋ, ಸರ್ಕಾರಿ ನೌಕರ ವಜಾ!

ಲಖನೌ, ಮಾ. ೨೧: ಆಫೀಸ್‌ನಲ್ಲಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಫೋಟೋ ಹಾಕಿದ್ದ ಉತ್ತರ ಪ್ರದೇಶ ವಿದ್ಯುತ್ ನಿಗಮ ನಿಯಮಿತದ (ಯುಪಿಸಿಎಲ್) ಉಪವಿಭಾಗಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ವಿಚಾರಣೆ ನಂತರ ಅಧಿಕಾರಿ ರವೀಂದ್ರ ಪ್ರಕಾಶ್ ಗೌತಮ್ ನನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಯುಪಿಸಿಎಲ್ ಅಧ್ಯಕ್ಷ ಎಂ. ದೇವರಾಜ್ ಆದೇಶಿಸಿದ್ದಾರೆ. ಹತ್ಯೆಗೀಡಾಗಿರುವ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ತನ್ನ ಆರಾಧ್ಯ ದೈವನಂತೆ ಆತನ ಪ್ರತಿಮೆ ಮತ್ತು ಫೋಟೋವನ್ನು ಗೌತಮ್ ಕಚೇರಿಯಲ್ಲಿ ಹಾಕಿದ್ದು ತನಿಖೆ ವೇಳೆಯಲ್ಲಿ ಕಂಡುಬAದಿದೆ ಎಂದು ದಕ್ಷಿಣಾಂಚಲ್ ವಿದ್ಯುತ್ ವಿತರಣಾ ನಿಗಮದ ಎಂಡಿ ಅಮಿತ್ ಕಿಶೋರ್ ತಿಳಿಸಿದ್ದಾರೆ. ಸೋಮವಾರ ಎಸ್‌ಡಿಒ ಗೌತಮ್‌ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಜೂನ್ ೨೦೨೨ರಲ್ಲಿ ಫರೂಕಾಬಾದ್ ಜಿಲ್ಲೆಯ ಕಾಯಮ್‌ಗಂಜ್ ಉಪವಿಭಾಗ-II ರಲ್ಲಿ ಸೇವೆಗೆ ನಿಯೋಜಿಸಿದ್ದಾಗ ಗೌತಮ್ ಫೋಟೋ ಹಾಕಿದ್ದು, ಕೊಠಡಿಯ ವೀಡಿಯೋ ವೈರಲ್ ಆದ ನಂತರ ಪ್ರಾಥಮಿಕ ತನಿಖೆ ನಡೆಸಿ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗತ್ತು.