ಗೋಣಿಕೊಪ್ಪ ವರದಿ, ಮಾ. ೨೦: ಕ್ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಮತ್ತು ನಿನಾದ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಏಪ್ರಿಲ್ ೭ ರಂದು ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯಲ್ಲಿ ‘ಉಮ್ಮತ್ ಬೊಳಕ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಸೋಮಣ್ಣ ತಿಳಿಸಿದರು.
ಕೊಡವ ಭಾಷಿಕ ಜನಾಂಗಗಳ ಕಲೆಗೆ ಪ್ರೋತ್ಸಾಹ ನೀಡಲು ಉಮ್ಮತ್ತಾಟ್ ಹಾಗೂ ಬೊಳಕಾಟ್ ಸ್ಪರ್ಧೆ ನಡೆಯಲಿದೆ. ಕೊಡವ ಭಾಷಿಕ ಜನಾಂಗಗಳ ತಂಡಗಳು ಉಮ್ಮತ್ತಾಟ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೊಳಕಾಟ್ ತಂಡವು ಗ್ರಾಮಗಳ ಹೆಸರಿನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆಯಾ ಗ್ರಾಮಕ್ಕೆ ಒಳಪಡುವ ತಂಡಗಳು ಬೊಳಕಾಟ್ ತಂಡ ರಚಿಸಿಕೊಂಡು ಸ್ಪರ್ಧಿಸಬಹುದಾಗಿದೆ. ಉಮ್ಮತ್ತಾಟ್ ತಂಡದಲ್ಲಿ ೮ ಜನ ನರ್ತಕಿಯರು, ಇಬ್ಬರು ಹಾಡುಗಾರರು ಪಾಲ್ಗೊಳ್ಳಬಹುದು. ಬೊಳಕಾಟ್ ತಂಡದಲ್ಲಿ ೧೦ ಜನರು ಪಾಲ್ಗೊಳ್ಳಬಹುದಾಗಿದೆ. ಏಪ್ರಿಲ್ ೧ ರಂದು ನೋಂದಣಿಗೆ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ೯೪೮೧೯೩೧೧೨೭ ಸಂಪರ್ಕಿಸಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಾರ್ಯದರ್ಶಿ ಚೇಂದಿರ ಎಂ. ಬೋಪಣ್ಣ, ನಿರ್ದೇಶಕ ಕೊಳ್ಳಿಮಾಡ ಎನ್. ಕಾರ್ಯಪ್ಪ, ನಿನಾದ ವಿದ್ಯಾಸಂಸ್ಥೆ ಅಧ್ಯಕ್ಷೆ ಚೇಂದಿರ ನಿರ್ಮಲಾ ಬೋಪಣ್ಣ ಇದ್ದರು.