ಕುಶಾಲನಗರ, ಮಾ. ೨೦: ಬಿಜೆಪಿ ಶಾಸಕ ಈಶ್ವರಪ್ಪ ವಿರುದ್ಧ ಕುಶಾಲನಗರ ತಾಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈಶ್ವರಪ್ಪ ಅವರು ಮುಸ್ಲಿಂ ನಂಬಿಕೆಯ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿ, ಮುಸ್ಲಿಂ ಸಮುದಾಯವನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಸಮುದಾಯಗಳ ನಡುವೆ ಒಡಕನ್ನು ತರುವ ಈಶ್ವರಪ್ಪ ಎಂಬ ಪೋಸ್ಟರ್‌ಗಳನ್ನು ಹಿಡಿದು, ಈಶ್ವರಪ್ಪ ನವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈಶ್ವರಪ್ಪನವರನ್ನು ಬಂಧಿಸ ಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕರೀಂ, ತಾಲೂಕು ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ಜಕ್ರಿಯಾ ಮಾತನಾಡಿ, ಈಶ್ವರಪ್ಪ ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ನಂತರ ತಾಲೂಕು ತಹಶೀಲ್ದಾರರಿಗೆ ಒಕ್ಕೂಟದ ವತಿಯಿಂದ ಮನವಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭ ಕುಶಾಲನಗರ ತಾಲೂಕು ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಮೀರ್, ಖಜಾಂಜಿ ಇರ್ಫಾನ್ ಹಾಗೂ ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡರುಗಳು, ಎಲ್ಲಾ ಮಸೀದಿಗಳ ಕಮಿಟಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದರು.