ಮಡಿಕೇರಿ, ಮಾ. ೨೦: ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಎರಡು ದಿನಗಳ ಹಿಂದೆ ಕೊಡವ ಹಾಕಿ ನಮ್ಮೆ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದ ಬೆನ್ನಲ್ಲೇ, ಇಂದು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ -೩ಎನ ಕ್ರಮಸಂಖ್ಯೆ ೨ ರಲ್ಲಿ

(ಮೊದಲ ಪುಟದಿಂದ) ನಮೂದಾಗಿರುವ ಕೊಡಗರು ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಷಾಹೀನ್ ಪರ್ವೀನ್ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಯುಕೊ ಸಂಘಟನೆಯ ನಿಯೋಗವನ್ನು ತನ್ನ ನೇತೃತ್ವದಲ್ಲಿ ಮುಖ್ಯಮಂತ್ರಿ ಬಳಿ ಕರೆದೊಯ್ಯಲಾಗಿತ್ತು. ಇದೀಗ ಸರಕಾರ ಈ ಬೇಡಿಕೆ ಈಡೇರಿಸಿದೆ. ಇದು ಹರ್ಷದಾಯಕ ವಿಚಾರವಾಗಿದ್ದು, ಅತ್ಯಂತ ಶೀಘ್ರವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಬೋಪಯ್ಯ ತಿಳಿಸಿದ್ದಾರೆ.

ಯುಕೊ ಸಂಘಟನೆಯ ಶ್ರಮ ಹಾಗೂ ಶಾಸಕ ಬೋಪಯ್ಯ ಅವರ ನಿರಂತರ ಪ್ರಯತ್ನ, ಸಂಸದ ಪ್ರತಾಪ್‌ಸಿಂಹ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕರಾದ ಅಪ್ಪಚ್ಚುರಂಜನ್, ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಕೊಡಗು ಬಿಜೆಪಿ ಹಾಗೂ ಕೊಡವ ಸಮುದಾಯದ ಎಲ್ಲಾ ಮುಖಂಡರ ಸಂಪೂರ್ಣ ಸಹಕಾರದಿಂದ ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗಿದೆ. ಇದು ಕೊಡವ ಜನಾಂಗದ ಬೇಡಿಕೆಗೆ ದೊರೆತ ಬಹುದೊಡ್ಡ ಗೆಲುವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆಭಾರಿಯಾಗಿದ್ದೇವೆ ಎಂದು ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಪ್ರತಿಕ್ರಿಯಿಸಿದ್ದಾರೆ.