ಮಡಿಕೇರಿ, ಮಾ. ೧೬: ನಾಲ್ಕು ವರ್ಷಗಳ ಅಂತರದ ಬಳಿಕ ಮತ್ತೆ ಪುನರಾರಂಭಗೊಳ್ಳುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಹಬ್ಬ ತಾ. ೧೮ ರಿಂದ (ನಾಳೆಯಿಂದ) ಶುಭಾರಂಭಗೊಳ್ಳಲಿದೆ. ಈ ಉತ್ಸವಕ್ಕಾಗಿ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸಜ್ಜಾಗಿದೆ.

ಕೊಡವ ಕುಟುಂಬಗಳ ನಡುವೆ ನಡೆಸಿಕೊಂಡು ಬರಲಾಗುತ್ತಿರುವ ಕೌಟುಂಬಿಕ ಹಾಕಿ ಹಬ್ಬ ಈ ಬಾರಿ ಅಪ್ಪಚೆಟ್ಟೋಳಂಡ ಕುಟುಂಬದ ಸಾರಥ್ಯದಲ್ಲಿ ನಡೆಯಲಿದೆ. ದಾಖಲೆ ಎಂಬAತೆ ಈ ಬಾರಿ ೩೩೬ ಕುಟುಂಬ ತಂಡಗಳು ಅಪ್ಪಚೆಟ್ಟೋಳಂಡ ಹಾಕಿ ಹಬ್ಬದಲ್ಲಿ ಭಾಗವಹಿಸಲಿದ್ದು, ೨೩ ದಿನಗಳ ಕಾಲ ಹಾಕಿ ಪ್ರೇಮಿಗಳಿಗೆ ರಸದೌತಣ ಉಣಬಡಿಸಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹಾಕಿ ಉತ್ಸವದ ಸಂಚಾಲಕ ಮನು ಮುತ್ತಪ್ಪ ಅವರು, ೧೯೯೨ರಲ್ಲಿ ಆರಂಭಗೊAಡ ಹಾಕಿ ಉತ್ಸವ ನಿರಂತರವಾಗಿ ನಡೆದುಕೊಂಡು ಬರುತ್ತಿತ್ತಾದರೂ ೨೦೧೮ರಲ್ಲಿನ ಪ್ರಕೃತಿ ವಿಕೋಪ ಹಾಗೂ ಕೋವಿಡ್ ಕಾರಣಗಳಿಂದಾಗಿ ನಾಲ್ಕು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಚಾಲನೆ ನೀಡುತ್ತಿದ್ದು, ಈ ಬಾರಿ ಅಪ್ಪಚೆಟ್ಟೋಳಂಡ ಕುಟುಂಬದವರಿಗೆ ಜವಾಬ್ದಾರಿ ಸಿಕ್ಕಿದೆ. ಹಾಕಿ ಹಬ್ಬಕ್ಕಾಗಿ ನಾಪೋಕ್ಲುವಿನಲ್ಲಿ ಮೂರು ಮೈದಾನಗಳನ್ನು ಸಿದ್ಧಪಡಿಸಲಾಗಿದ್ದು, ೨೩ ದಿನಗಳ ಕಾಲ ಪ್ರತಿದಿನ ೨೧ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ವಿಶ್ವ ದಾಖಲೆ: ಹಾಕಿ ಹಬ್ಬದ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ೩೩೬ ಕುಟುಂಬ ತಂಡಗಳು ಭಾಗವಹಿಸುತ್ತಿದ್ದು, ಇದು ವಿಶ್ವ ದಾಖಲೆಯಾಗಿದೆ. ಈ ಹಿಂದೆ ೨೦೧೮ರಲ್ಲಿ ನಾಪೋಕ್ಲುವಿನಲ್ಲಿಯೇ ನಡೆದ ಕುಲ್ಲೇಟಿರ ಕಪ್ ಪಂದ್ಯಾವಳಿಯಲ್ಲಿ ೨೨೯ ಕುಟುಂಬ ತಂಡಗಳು ಭಾಗವಹಿಸಿದ್ದವು. ಈ ಬಾರಿ ಅತಿ ಹೆಚ್ಚು ತಂಡಗಳು ಭಾಗವಹಿಸಿರುವುದು ದಾಖಲೆಯಾಗಿದೆ ಎಂದು ತಿಳಿಸಿದರು.

ಮೆರವಣಿಗೆ: ತಾ. ೧೮ ರಂದು ಪಂದ್ಯಾವಳಿಗೆ ಚಾಲನೆ ದೊರಕಲಿದ್ದು, ಅಂದು ಬೆಳಿಗ್ಗೆ ೧೦ ಗಂಟೆಗೆ ಪೊನ್ನಾಡ್ ಸೂಪರ್ ಮಾರ್ಕೆಟ್ ಬಳಿಯಿಂದ ಅದ್ಧೂರಿ ಮೆರವಣಿಗೆ ಆರಂಭಗೊಳ್ಳಲಿದೆ. ಇದುವರೆಗೆ ಹಾಕಿ ಹಬ್ಬ ನಡೆಸಿದಂತಹ ಎಲ್ಲ ಕುಟುಂಬ ತಂಡಗಳು ಹಾಗೂ ಅಪ್ಪಚೆಟ್ಟೋಳಂಡ ತಂಡ ಸೇರಿದಂತೆ ೨೩ ಆಯೋಜಕ ಕುಟುಂಬದ

(ಮೊದಲ ಪುಟದಿಂದ) ತಂಡ ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಮನು ಮುತ್ತಪ್ಪ ಹೇಳಿದರು.

೨೩ ಸುತ್ತು ಗುಂಡು: ನಂತರ ನಾಪೋಕ್ಲುವಿನ ಪ್ರಮುಖ ಜ. ತಿಮ್ಮಯ್ಯ ಮೈದಾನದಲ್ಲಿ ೧೧ ಗಂಟೆಗೆ ಎಲ್ಲ ಕುಟುಂಬ ತಂಡಗಳ ಪ್ರಮುಖರು ಸೇರಿ ೨೩ ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವದರ ಮೂಲಕ ಹಾಕಿ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಕಲಾ ತಂಡಗಳಿAದ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಹಾಕಿ ಅಕಾಡೆಮಿ ಹಾಗೂ ಅಪ್ಪಚೆಟ್ಟೋಳಂಡ ಕುಟುಂಬದ ಧ್ವಜಾರೋಹಣ ನಡೆಯಲಿದೆ ಎಂದರು.

ಪ್ರದರ್ಶನ ಪಂದ್ಯಾವಳಿ: ಬೆಳಿಗ್ಗೆ ೧೧.೩೦ಕ್ಕೆ ೩೭ನೇ ಕೂರ್ಗ್ ಫೀಲ್ಡ್ ರೆಜಿಮೆಂಟ್ ಹಾಗೂ ಕೊಡವ ಅಕಾಡೆಮಿ-೧೧ ಈ ತಂಡಗಳ ನಡುವೆ ಮೊದಲ ಪ್ರದರ್ಶನ ಪಂದ್ಯಾವಳಿ ನಡೆಯಲಿದೆ. ಮಧ್ಯಾಹ್ನ ೩.೩೦ ಗಂಟೆಗೆ ಇಂಡಿಯನ್ ಜೂನಿಯರ್ ಹಾಕಿ ತಂಡ ಹಾಗೂ ಕೊಡಗಿನ ಒಲಂಪಿಯನ್ ಆಟಗಾರರನ್ನು ಒಳಗೊಂಡ ಕರ್ನಾಟಕ ತಂಡಗಳ ನಡುವೆ ಎರಡನೇ ಪ್ರದರ್ಶನ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.

ಪ್ರತಿಭೆಗಳಿಗೆ ಪ್ರೋತ್ಸಾಹ: ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರ ಪೈಕಿ ೨೫ ಮಂದಿ ಯುವ ಪ್ರತಿಭೆಗಳನ್ನು ಗುರುತಿಸಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ತರಬೇತಿ ಶಿಬಿರ ಏರ್ಪಡಿಸಿ ಭವಿಷ್ಯದ ಆಟಗಾರರನ್ನಾಗಿ ರೂಪಿಸುವ ಚಿಂತನೆ ಇದೆ. ಈ ಪಂದ್ಯಾವಳಿಯಲ್ಲಿ ೫೦ ಮಂದಿಯ ತಾಂತ್ರಿಕ ಸಿಬ್ಬಂದಿಗಳ ತಂಡ ಕಾರ್ಯನಿರ್ವಹಿಸಲಿದೆ. ಬೆಂಗಳೂರಿನ ತ್ಯಾಜ್ಯ ನಿರ್ವಹಣಾ ಸಂಸ್ಥೆಯೊAದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ. ಮಂಗಳೂರು ಹಾಗೂ ಮಣಿಪಾಲದ ವೈದ್ಯಕೀಯ ಸಿಬ್ಬಂದಿಗಳು ಆರೋಗ್ಯ ಸೇವೆ ನೀಡಲಿದ್ದಾರೆ ಎಂದು ಮನು ಮುತ್ತಪ್ಪ ಹೇಳಿದರು. ಗೋಷ್ಠಿಯಲ್ಲಿ ಹಾಕಿ ಉತ್ಸವ ಸಮಿತಿ ಪ್ರಮುಖರುಗಳಾದ ಭೀಮಯ್ಯ, ಪ್ರತಿಮಾ ಮೊಣ್ಣಪ್ಪ, ರೀನಾ ಪೂವಯ್ಯ, ಡೀನ್ ಪೂವಯ್ಯ, ಮೋನಿಶಾ ಮುತ್ತಪ್ಪ ಇದ್ದರು.