(ವರದಿ: ಪ್ರಜ್ವಲ್ ಜಿ.ಆರ್.)

ಮಡಿಕೇರಿ, ಮಾ. ೧೫: ಕಾಡಿನಲ್ಲಿ ಸಹಜವಾಗಿ ಸತ್ತು, ಕೊಳೆತು ಮಣ್ಣಿನಲ್ಲಿ ಹೊಂದಿಕೊಳ್ಳದೇ ಇತರ ನೂತನ ಗಿಡಗಳ ಜನನಕ್ಕೆ ಅಡ್ಡಿಯಾಗುವ ಕೆಲ ಗಿಡಗಳನ್ನು, ನೈಸರ್ಗಿಕವಾಗಿ ಸಂಭವಿಸುವ ಕಾಡ್ಗಿಚ್ಚು ನಾಶಪಡಿಸಿ ಪರಿಸರ ಸಮತೋಲನಕ್ಕೆ ಸಹಕಾರಿಯಾಗುತ್ತದೆ. ಇಂತಹ ಕಾಡ್ಗಿಚ್ಚುಗಳು ಸುಡು ಬೇಸಿಗೆಯಲ್ಲಿ ಸಂಭವಿಸುತ್ತವೆ. ಬೇಸಿಗೆಯಲ್ಲಿ ಕಾಡಿನ ಮರ-ಗಿಡಗಳು ಸಂಪೂರ್ಣ ಒಣಗಿ ಬೇಸಿಗೆ ಪ್ರಾರಂಭವಾಗುವಾಗಿನ ಸ್ವಾಭಾವಿಕ ಸಿಡಿಲು ಬಡಿತಕ್ಕೆ ಕಾದು ನಿಂತಿರುತ್ತವೆ. ಪರಿಸರಕ್ಕೆ, ಅರಣ್ಯದ ಮಣ್ಣಿಗೆ ಅನಗತ್ಯವಾಗಿರುವ ಕೊಳೆತ ಅಜೀವ ಗಿಡಗಳು ಹಾಗೂ ಎಲೆಗಳು ಒಣ ಮರಗಳ ಮೇಲೆ ಬಡಿಯುವ ಸಿಡಿಲಿನಿಂದ ಉತ್ಪತ್ತಿಯಾಗುವ ಬೆಂಕಿಗಾಹುತಿಯಾಗಿ ಮಣ್ಣಿಗೆ ಅವುಗಳ ಪೋಷಕಾಂಶಗಳನ್ನು ನೀಡಿ ಸಣ್ಣ-ಪುಟ್ಟ ವನ್ಯಪ್ರಾಣಿಗಳಿಗೂ ಆಹಾರವಾಗುವ ಪ್ರಕ್ರಿಯೆಯು ಒಂದು ನೈಸರ್ಗಿಕ ವಾರ್ಷಿಕ ಚಕ್ರ. ಸಿಡಿಲು ಕಾಡ್ಗಿಚ್ಚನ್ನು ಹುಟ್ಟುಹಾಕಿ ಬಳಿಕ ಬಹುತೇಕ ಸುರಿಯುವ ಮಳೆಯು ಕಾಡಿಗೆ-ಕಾಡೇ ಸಂಪೂರ್ಣ ನಶಿಸಿ ಹೋಗುವುದನ್ನು ತಡೆಗಟ್ಟುವಲ್ಲಿ ಸಫಲವಾಗಿ ನೈಸರ್ಗಿಕ ಸಮತೋಲನ ನಿರ್ವಹಿಸುತ್ತದೆ.

ಆದರೆ ಇಂದು ಕೊಡಗು ಜಿಲ್ಲೆಯಲ್ಲಿ ಯಾವುದೇ ಸಿಡಿಲು ಬಡಿತ ಪ್ರಾರಂಭವಾಗದಿದ್ದರೂ ಪ್ರತಿನಿತ್ಯ ಮಡಿಕೇರಿಯಲ್ಲಿನ ಮುಖ್ಯ ಅಗ್ನಿಶಾಮಕದಳದ ಕಚೇರಿಯಿಂದ ಬೆಳ್ಳಂಬೆಳಿಗ್ಗೆ ಸೈರನ್ ಶಬ್ಧ ಮಾಡುವ ವಾಹನಗಳು ವೇಗದಿಂದ ಚಲಿಸುವ ದೃಶ್ಯ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕೆಲ ದಿನಗಳಿಂದ ಪ್ರತಿನಿತ್ಯ ಜಿಲ್ಲೆಯ ಸರಾಸರಿ ೪ ರಿಂದ ೫ ಕಡೆಗಳಿಗೆ ಅಗ್ನಿಶಾಮಕದಳದ ವಾಹನಗಳು ತೆರಳಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ವಾಹನಗಳು ತೆರಳಲು ಅಸಾಧ್ಯವಾದ ಸ್ಥಳಗಳಲ್ಲಿ ಅರಣ್ಯ ಇಲಾಖೆ, ಗ್ರಾಮಸ್ಥರು ಸೇರಿ ಹುಲ್ಲು-ಪೊದೆಗಳನ್ನು ಅಗ್ನಿಗೆ ಬಡಿದು ಹಿಡಿತಕ್ಕೆ ತರುತ್ತಿರುವ ಸಾಹಸಮಯ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.

ಅಷ್ಟಾಗಿ ಇದೀಗ ಶೆಖೆಯ ವಾತಾವರಣವಿದ್ದರೂ ಬೇಸಿಗೆಯ ಸಿಡಿಲು-ಗುಡುಗು ಪ್ರಸ್ತುತ ವರ್ಷ ಜಿಲ್ಲೆಗೆ ನಿನ್ನೆಯಷ್ಟೇ ಕಾಲಿಟ್ಟಿದೆ. ಇದಕ್ಕೂ ಮೊದಲೇ ೧೦೦ ಎಕ್ರೆಗಳಿಗಿಂತ ಹೆಚ್ಚು ಕಾಡು, ಹುಲ್ಲುಗಾವಲು ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗಿದೆ. ಇದು ಮಾನವನ ನಿರ್ಲಕ್ಷö್ಯ ಹಾಗೂ ಕಿಡಿಗೇಡಿಗಳ ಕುಕೃತ್ಯದಿಂದ ಸೃಷ್ಟಿಯಾಗಿರುವ ಕಾಡ್ಗಿಚ್ಚಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕೆಲ ಕಿಡಿಗೇಡಿಗಳು ಕುಚೇಷ್ಟೆಗೆ ಕಾಡಿನ ಒಣ ಹುಲ್ಲಿಗೆ ಬೆಂಕಿ ಹಾಕಿದರೆ, ಮತ್ತೆ ಕೆಲವರು ಸಿಗರೇಟ್, ಬೀಡಿಯನ್ನು ಸಂಪೂರ್ಣ ನಂದಿಸದೆ ಎಲ್ಲೆಂದರಲ್ಲಿ ಬಿಸಾಡಿ ಕಾಡ್ಗಿಚ್ಚಿಗೆ ಕಾರಣರಾಗುತ್ತಿದ್ದಾರೆ. ಮತ್ತೆ ಕೆಲವರು ಕಸ-ತ್ಯಾಜ್ಯಗಳನ್ನು ಕಸ-ವಿಲೇವಾರಿ ವಾಹನಗಳಿಗೆ ಹಾಕುವ ಬದಲು ರಸ್ತೆ ಬದಿ ಎಸೆದು ಬೆಂಕಿ ಹತ್ತಿಸಿದಾಗ ಬೆಂಕಿ ನಿಯಂತ್ರಣ ಕಳೆದುಕೊಂಡು ಮಿತಿಮೀರಿ ಹರಡುತ್ತಿದೆ.

ಮಾರ್ಚ್ ೧ ರಿಂದೀಚೆಗೆ ಭಾಗಮಂಡಲದ ತಾವೂರು ಬೆಟ್ಟ, ದುಬಾರೆ ರಕ್ಷಿತಾರಣ್ಯ, ಮಡಿಕೇರಿಯ ಸಂಪಿಗೆ ಕಟ್ಟೆ, ಚೆತ್ತುಕ್ಕಾಯ ಕುಂಡತ್ತಿಕಾನ, ನಾಗರಹೊಳೆ ಅರಣ್ಯದ ತಿತಿಮತಿ ಮತ್ತಿಗೋಡು ಕಾಡು, ಮೊಣ್ಣಂಗೇರಿಯ ಅರಣ್ಯ ವ್ಯಾಪ್ತಿ, ಕಕ್ಕಬ್ಬೆ ವ್ಯಾಪ್ತಿಯ ಇಗ್ಗುತ್ತಪ್ಪ ಬೆಟ್ಟ, ಆಲೂರು-ಸಿದ್ದಾಪುರ ಅರಣ್ಯವ್ಯಾಪ್ತಿಯ ಕೆಲ ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ. ಇವುಗಳಲ್ಲದೆ ಚೆಟ್ಟಳ್ಳಿ ಪಂಚಾಯಿತಿ ಕಟ್ಟಡ ಹಿಂಭಾಗ, ಮಡಿಕೇರಿ ಕಾವೇರಿ ಹಾಲ್ ಸಮೀಪ, ಗರ್ವಾಲೆ ಗ್ರಾಮದ ಕಾಫಿ ತೋಟ, ಮುಳ್ಳೂರು ಗ್ರಾಮದ ಕಾಫಿ ತೋಟಗಳೂ ಹಾನಿಯಾಗಿದ್ದು, ಕಿಡಿಗೇಡಿಗಳ ಕೈಚಳಕವೇ ಇದಕ್ಕೆ ಕಾರಣ ಎನ್ನಬಹುದಾಗಿದೆ.

ಅಗ್ನಿಶಾಮಕ ದಳಕ್ಕೆ ಪ್ರತಿನಿತ್ಯ ೪ ರಿಂದ ೫ ಕರೆಗಳು – ರಜೆ ರಹಿತ ದುಡಿಯುತ್ತಿರುವ ಸಿಬ್ಬಂದಿ

ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ ಜಿಲ್ಲಾ ಅಗ್ನಿಶಾಮಕದಳಕ್ಕೆ ಸರಾಸರಿ ೪ ರಿಂದ ೫ ತುರ್ತು ಕರೆಗಳು ಬರುತ್ತಿವೆ. ಒಂದು ದಿನ ೨೩ ಕರೆಗಳು ಬಂದ ಉದಾಹರಣೆಯೂ ಇದೆ. ರಸ್ತೆ ಸಂಪರ್ಕ ಇಲ್ಲದ ಕಡೆಗಳಲ್ಲಿ ಬೆಂಕಿ ನಂದಿಸಲು ಕಷ್ಟಸಾಧ್ಯವಾದರೂ ಜಿಲ್ಲೆಯಲ್ಲಿನ ಎಲ್ಲಾ ೪ ಕೇಂದ್ರಗಳ ಸಿಬ್ಬಂದಿಗಳೂ ಬೆಂಕಿಯೊAದಿಗಿನ ಕಾಳಗದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಬೆಂಕಿ ನಂದಿಸುವಲ್ಲಿ ಮಾನವ ಸಂಪನ್ಮೂಲದ ಪಾತ್ರವೇ ಪ್ರಮುಖವಾಗಿದ್ದು, ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪ ಹಾಗೂ ಕುಶಾಲನಗರ ಕೇಂದ್ರಗಳಲ್ಲಿನ ಸಿಬ್ಬಂದಿಗಳು ರಜೆಯಿಲ್ಲದೆ ದಿನನಿತ್ಯ ಶ್ರಮಿಸುತ್ತಿದ್ದಾರೆ. ತಿತಿಮತಿ ವ್ಯಾಪ್ತಿಯ ಅರಣ್ಯ ವಿಭಾಗದ ರಕ್ಷಣೆಗೆ ಅಲ್ಲಿ ಹೆಚ್ಚುವರಿ ವಾಹನವನ್ನು ಮುಂಜಾಗ್ರತಾ ಕ್ರಮವಾಗಿ ಮೀಸಲಿಡಲಾಗಿದೆ. ಇತ್ತೀಚೆಗೆ ಸಂಭವಿಸಿದ ಎಲ್ಲಾ ಕಾಡ್ಗಿಚ್ಚುಗಳೂ ಮಾನವ ನಿರ್ಮಿತವಾಗಿದ್ದು, ಈ ಕುಕೃತ್ಯದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂಬುದಾಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದನ್.ಪಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಅರಣ್ಯ ಇಲಾಖೆಯಿಂದ ೨೦೦ ಕಿ.ಮೀ ನಷ್ಟು ಅಗ್ನಿ ರೇಖೆ ನಿರ್ಮಾಣ

ಪ್ರಸ್ತುತ ಅರಣ್ಯ ಇಲಾಖೆಯು ಕೊಡಗು ಜಿಲ್ಲೆಯಲ್ಲಿ ೨೦೦ಕಿ.ಮೀ ನಷ್ಟು ಅಗ್ನಿ ರೇಖೆಗಳನ್ನು ನಿರ್ಮಿಸಿ ಕಾಡ್ಗಿಚ್ಚು ತಡೆಗೆ ಕ್ರಮ ವಹಿಸಿದೆ. ಒಂದು ವೇಳೆ ಕಾಡ್ಗಿಚ್ಚು ಸಂಭವಿಸಿದರೆ, ಒಂದು ಕಡೆಯಿಂದ ಮತ್ತೊಂದೆಡೆಗೆ ಅಗ್ನಿ ಹರಡುವ ಸನ್ನಿವೇಶಗಳು ಇದರಿಂದಾಗಿ ಕಡಿಮೆಯಾಗುತ್ತವೆ. ಆದರೂ ೧೦೦ಕ್ಕೂ ಅಧಿಕ ಎಕೆರೆಯಷ್ಟು ಅರಣ್ಯ ಹಾಗೂ ಹುಲ್ಲುಗಾವಲು ಪ್ರದೇಶ ಬೆಂಕಿಗಾಹುತಿಯಾಗಿದೆ.

(ಮೊದಲ ಪುಟದಿಂದ) ಕೆಲ ಕುರುಚಲು ಅರಣ್ಯ ಹಾಗೂ ಹುಲ್ಲುಗಾವಲು ಪ್ರದೇಶಗಳು ಅರಣ್ಯ ಇಲಾಖೆಗೆ ಸೇರದ ಕಾರಣ ಇಂತಹ ಪ್ರದೇಶಗಳಲ್ಲಿ ಇಲಾಖೆ ವತಿಯಿಂದ ಅಗ್ನಿ ರೇಖೆ ಹಾಕಲು ಅಸಾಧ್ಯವಾಗಿದ್ದು, ಬಹುತೇಕ ಈ ಪ್ರದೇಶಗಳೇ ಇಂದು ಅಗ್ನಿ ಜ್ವಾಲೆಗೆ ಬಲಿಯಾಗುತ್ತಿವೆ. ಅರಣ್ಯ ಇಲಾಖೆಗೆ ಸೇರದ ಪ್ರದೇಶಗಳಲ್ಲಿ ಯಾವುದೇ ರೀತಿಯ ಮುಂಜಾಗ್ರತಾ ಅಗ್ನಿ ರೇಖೆಗಳನ್ನು ನಿರ್ಮಿಸಲು ಅಸಾಧ್ಯವಾಗಿದ್ದು, ಕಾಡ್ಗಿಚ್ಚು ಹರಡುವಿಕೆ ನಿಯಂತ್ರಿಸಲಾಗದು. ಇಲ್ಲಿಯವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಕಾಡ್ಗಿಚ್ಚು ಪ್ರಕರಣಗಳಲ್ಲಿ ಬಹುತೇಕ ಪ್ರದೇಶಗಳು ಸಿ.ಆ್ಯಂಡ್.ಡಿ ಜಾಗವಾಗಿವೆ. ಇವುಗಳು ಕಾಡು ಪ್ರದೇಶವಾಗಿದ್ದರೂ ಅರಣ್ಯ ಇಲಾಖೆಗೆ ಹಸ್ತಾಂತರವಾಗದ ಜಾಗಗಳಾಗಿವೆ. ಈ ಪ್ರದೇಶಗಳಲ್ಲಿ ಅರಣ್ಯ ರೇಖೆ ಇಲಾಖೆಯಿಂದ ನಿರ್ಮಿಸಲಾಗದು. ಇದರೊಂದಿಗೆ, ಅರಣ್ಯಕ್ಕೆ ಹೊಂದಿಕೊAಡಿರುವ ಕೆಲ ಒತ್ತುವರಿ ಪ್ರದೇಶಗಳಲ್ಲಿಯೂ ಸ್ಥಳೀಯರು ಅರಣ್ಯ ರೇಖೆ ನಿರ್ಮಿಸಲು ಅಡ್ಡಿಪಡಿಸುತ್ತಾರೆ. ಈ ಕಾರಣಗಳಿಂದಾಗಿ ಕಾಡ್ಗಿಚ್ಚು ನಿಯಂತ್ರಣ ಕಷ್ಟಸಾಧ್ಯವಾಗಿದೆ ಎಂಬುದಾಗಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಅವರು ಮಾಹಿತಿಯಿತ್ತಿದ್ದಾರೆ.

ಸ್ವಯಂ ಜಾಗೃತಿ ಅಗತ್ಯ

ಬೇಸಿಗೆ ರಜಾ ಅವಧಿಯಾಗಿರುವ ಕಾರಣ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಪ್ರವಾಸಿಗರಿಗೆ ಆತಿಥ್ಯ ನೀಡುವ ರೆಸಾರ್ಟ್, ಹೋಂಸ್ಟೇಗಳು ಕ್ಯಾಂಪ್‌ಫೈಯರ್ ಅಳವಡಿಸುವಾಗ ಅಗತ್ಯ ಎಚ್ಚರಿಕೆ ವಹಿಸಿಕೊಳ್ಳಬೇಕಿದೆ. ಮಧ್ಯರಾತ್ರಿಯವರೆಗೂ ಇಂತಹ ಕ್ಯಾಂಪ್‌ಫೈಯರ್‌ಗಳು ಉರಿಯುತ್ತಲೇ ಇರುವಂತಹ ಸನ್ನಿವೇಶಗಳನ್ನು ತಡೆಗಟ್ಟಬೇಕಿದೆ.

ತೋಟಗಳಲ್ಲಿ ಒಣ ಎಲೆಗಳು ಬಿದ್ದಿರುವುದನ್ನು ಒಂದೆಡೆ ಜೋಡಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕೇ ಹೊರತು, ಅಜಾಗರೂಕತೆಯಿಂದ ಇಂತಹ ಎಲೆಗಳಿಗೆ ಬೆಂಕಿ ಹಚ್ಚಿದರೆ ಅನಾಹುತ ತಪ್ಪದು.

ಮನೆ-ಅಂಗಡಿಗಳಲ್ಲಿನ ಕಸವನ್ನು ಕಸ ವಿಲೇವಾರಿ ವಾಹನಕ್ಕೆ ಹಾಕುವ ಬದಲು, ರಸ್ತೆ ಬದಿಯಲ್ಲಿ ಗುಡ್ಡೆ ಸೇರಿಸಿ ಬೆಂಕಿ ಹಾಕುವ ಕಾರ್ಯಕ್ಕೆ ಮುಂದಾದಲ್ಲಿ ಬೆಂಕಿಯು ಕುರುಚಲು ಕಾಡಿಗೆ ಹಬ್ಬಿದರೆ ನಿಯಂತ್ರಿಸಲು ಕಷ್ಟಸಾಧ್ಯ.