ಮಡಿಕೇರಿಯಲ್ಲಿ ನಡೆದ ರಕ್ತದಾನ ಶಿಬಿರ

ಮಡಿಕೇರಿ, ಮಾ. ೧೫: ಜಿಲ್ಲೆಯಲ್ಲಿ ಮಾಸಿಕ ೫೦೦ ಯೂನಿಟ್ ರಕ್ತದ ಅವಶ್ಯಕತೆ ಇದೆ. ಈ ಹಿನ್ನೆಲೆ ಸಂಘ ಸಂಸ್ಥೆಗಳು ಹೆಚ್ಚು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದ ಕೊರತೆ ಎದುರಾಗದಂತೆ ಮುತುವರ್ಜಿ ವಹಿಸುವಂತೆ ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಕರೆ ನೀಡಿದರು.

ನಗರ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ರಕ್ತನಿಧಿ ಕೇಂದ್ರ ಸಂಯುಕ್ತಾ ಆಶ್ರಯದಲ್ಲಿ ನಗರದ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಇರುವ ಹಿನ್ನೆಲೆ ಸ್ಥಳೀಯ ಸಂಸ್ಥೆಗಳು ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಮಾಸಿಕ ೫೦೦ ಯೂನಿಟ್ ರಕ್ತದ ಬೇಡಿಕೆ ಇದೆ. ಇದನ್ನು ಮನಗಂಡು ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಪ್ರತಿಯೊಬ್ಬರು ಮುಂದಾಗಬೇಕು. ಯುವಜನತೆ ಈ ಬಗ್ಗೆ ಜಾಗೃತಗೊಳ್ಳುವುದರೊಂದಿಗೆ ಇತರರಿಗೂ ಅರಿವು ಮೂಡಿಸಬೇಕು.

ತಿಂಗಳಿಗೆ ೮ ರಿಂದ ೧೦ ಶಿಬಿರ ಜಿಲ್ಲೆಯಲ್ಲಿ ಆಯೋಜನೆಗೊಂಡರೆ ಅಗತ್ಯಕ್ಕೆ ತಕ್ಕ ರಕ್ತ ಶೇಖರಣೆಗೊಳ್ಳುತ್ತದೆ. ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದೆ ಇರುವ ಕಾರಣ ಆರೋಗ್ಯವಂತ ವ್ಯಕ್ತಿ ೪ ತಿಂಗಳಿಗೊಮ್ಮೆ ರಕ್ತದಾನ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ರಕ್ತದಾನದಿಂದ ಯಾವುದೇ ತೊಂದರೆ ಇಲ್ಲ. ರಕ್ತದಾನದಿಂದ ಗಂಭೀರ ಕಾಯಿಲೆಗಳು ಬಾರದಂತೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.

೩೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ನಗರಾಧ್ಯಕ್ಷ ಧನಂಜಯ್, ಕಾರ್ಯದರ್ಶಿ ಸಂತೋಷ್ ಅಣ್ವೇಕರ್, ಕೋಶಾಧಿಕಾರಿ ಮಹಮ್ಮದ್ ಕಬೀರ್, ನಿರ್ದೇಶಕರುಗಳಾದ ಸವಿತಾ ಅರುಣ್, ಅನುರಾಗ್ ಸೇರಿದಂತೆ ಇನ್ನಿತರರು ಹಾಜರಿದ್ದರು.