ನಾಪೋಕ್ಲು, ಮಾ. ೧೫: ಸಮೀಪದ ಹಳೆ ತಾಲೂಕಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ವೊಂದು ಪತ್ತೆಯಾಗಿದ್ದು, ಉರಗತಜ್ಞರ ನೆರವಿನಿಂದ ಹಿಡಿದು ಕಾಡಿಗೆ ಬಿಡಲಾಗಿದೆ. ಹಳೆ ತಾಲೂಕಿನ ಮನೆಯೊಂದರ ಪಕ್ಕದಲ್ಲಿ ಇರುವ ಕಾಫಿ ಗಿಡದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಉರಗ ತಜ್ಞ ಮೂರ್ನಾಡಿನ ಪ್ರಜ್ವಲ್ ಕುಮಾರ್ ಕಾಳಿಂಗಸರ್ಪವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ. ಇಲ್ಲಿನ ನಿವಾಸಿ ಕುಂದೇರಿರ ಸತೀಶ್ ಎಂಬವರ ತೋಟದ ಕಾಫಿ ಗಿಡದ ಮೇಲೆ ೧೧ ಅಡಿ ಉದ್ದದ ಕಾಳಿಂಗ ಸರ್ಪವನ್ನು ಕಾರ್ಮಿಕರು ಕಂಡು ಸತೀಶ್ ಅವರಿಗೆ ತಿಳಿಸಿದ್ದಾರೆ. ಅವರು ಉರಗತಜ್ಞ ಪ್ರಜ್ವಲ್ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪ್ರಜ್ವಲ್ ಕಾಫಿ ಗಿಡದ ಮೇಲಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.