ಮಡಿಕೇರಿ, ಮಾ. ೧೪: ಮಡಿಕೇರಿ ಕೊಡವ ಸಮಾಜದ ವತಿಯಿಂದ ನಡೆಯುತ್ತಿರುವ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಈ ಸೇನಾನಿಯ ಪುತ್ಥಳಿಯನ್ನು ಅಳವಡಿಸುವ ಚಿಂತನೆ ನಡೆಸಲಾಗಿದೆ. ವಿಶ್ವ ವಿಖ್ಯಾತರಾಗಿರುವ ಈ ಸೇನಾನಿಯ ಹೆಸರಿನಲ್ಲೇ ಶಾಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಯುವ ವಿದ್ಯಾರ್ಥಿಗಳಿಗೆ ಪದ್ಮಭೂಷಣ ತಿಮ್ಮಯ್ಯ ಅವರ ಬಗ್ಗೆ ಚಿಕ್ಕಂದಿನಿAದಲೇ ಅಭಿಮಾನ ಮೂಡಿಸುವ ಉದ್ದೇಶದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಪುತ್ಥಳಿ ಸಿದ್ಧಗೊಂಡಿದ್ದು, ಇದೀಗ ಶಾಲಾ ಆವರಣದಲ್ಲಿ ಇದರ ಅಳವಡಿಕೆಯ ಕೆಲಸ ನಡೆಯುತ್ತಿದೆ. ಪ್ರಸಿದ್ಧ ಶಿಲ್ಪಿ, ಮೈಸೂರಿನ ಅರುಣ್ ಯೋಗಿರಾಜ್ ಅವರು ಆಕರ್ಷಕ ಪುತ್ಥಳಿಯನ್ನು ಕೆತ್ತನೆ ಮಾಡಿದ್ದಾರೆ. ಅಂದಾಜು ರೂ. ೧೦ ಲಕ್ಷ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಮಡಿಕೇರಿ ಕೊಡವ ಸಮಾಜ, ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದ, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಸಂಘ - ಸಂಸ್ಥೆಯವರು ದೇಣಿಗೆ ನೀಡಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಿರ್ಮಾಣಗೊಂಡ ಸುಭಾಷ್ ಚಂದ್ರಬೋಸ್ ಪ್ರತಿಮೆ, ವಿಷ್ಣುವರ್ಧನ್ ಪ್ರತಿಮೆ ತಯಾರಿಸಿ ಗಮನ ಸೆಳೆದಿರುವ ಅರುಣ್ ಯೋಗಿರಾಜ್ ಅವರು ಈ ಪುತ್ಥಳಿಯನ್ನು ತಯಾರು ಮಾಡಿರುವುದಾಗಿ ಶಾಲಾ ಕರೆಸ್ಪಾಂಡೆAಟ್ ಕನ್ನಂಡ ಕವಿತಾ, ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ ಅವರುಗಳು ತಿಳಿಸಿದ್ದು, ಇದಕ್ಕೆ ಸಹಾಯ ನೀಡಿದವರನ್ನು ಸ್ಮರಿಸಿದ್ದಾರೆ.

ಮಾರ್ಚ್ ೩೧ರಂದು ಜನರಲ್ ತಿಮ್ಮಯ್ಯ ಅವರ ೧೧೭ನೆಯ ಜನ್ಮದಿನಾಚರಣೆ ನಡೆಯಲಿದ್ದು, ಆ ದಿನದಂದು ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದ ಸಂದರ್ಭ ಇದರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಪುತ್ಥಳಿ ಉದ್ಘಾಟನೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ತಾ. ೩೧ರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿರುವ ಏರ್‌ಮಾರ್ಷಲ್ ನಂದಾ ಕಾರ್ಯಪ್ಪ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ವಿಜೇತೆ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಗುವುದು.