ಚೆಯ್ಯಂಡಾಣೆ, ಮಾ. ೧೪: ಕೊಡಗು ಜಿಲ್ಲಾ ಸುನ್ನೀ ಯುವ ಜನ ಸಂಘ (ಎಸ್‌ವೈಎಸ್) ಕೊಡಗು ಜಿಲ್ಲಾ ಸಮಿತಿ ವತಿಯಿಂದ ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯವಾಕ್ಯದಲ್ಲಿ ಕುಶಾಲನಗರದ ಬಿಜಿಟಿ ಸಭಾಂಗಣದಲ್ಲಿ ಸಮಾವೇಶ ತಾ. ೧೫ ರಂದು (ಇಂದು) ಆಯೋಜಿಸಲಾಗಿದೆ.

ಪೂರ್ವಾಹ್ನ ೧೧ ಗÀಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿ ಧ್ವಜಾರೋಹಣ ಮಾಡಲಿದ್ದಾರೆ. ಕೊಡಗು ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಇಲ್ಯಾಸ್ ಅಲ್ ಹೈದರೂಸಿ ತಂಗಳ್ ಅಧ್ಯಕ್ಷತೆ ವಹಿಸಲಿದ್ದಾರೆ.

ಅಪರಾಹ್ನ ೨.೩೦ಕ್ಕೆ ಸಭೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಎಸ್‌ವೈಎಸ್ ಯೂನಿಟ್‌ಗಳಿಂದ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಕನಿಷ್ಟ ೧೦ ಮಂದಿ ಸದಸ್ಯರು ಮತ್ತು ಎಲ್ಲ ಸರ್ಕಲ್‌ಗಳಿಂದ ಆಯ್ಕೆಯಾದ ಪದಾಧಿಕಾರಿಗಳು, ಝೋನಲ್‌ನಿಂದ ಆಯ್ಕೆಯಾದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವು ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಉದ್ಘಾಟನೆಯನ್ನು ಕೂರ್ಗ್ ಜಂಇಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ ವೀರಾಜಪೇಟೆ ನೆರವೇರಿಸಲಿದ್ದಾರೆ.

ಪ್ರತಿನಿಧಿ ಸಮಾವೇಶದಲ್ಲಿ ಅಬೂಬಕ್ಕರ್ ಫೈಝಿ ಕುಂಬಡಾಜೆ ತರಬೇತಿ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಶಿಹಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರ್ ತಂಗಳ್, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಸುಂಟಿಕೊಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಮೈದೀನ್ ಪೊನ್ನತ್‌ಮೊಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.