ಗೋಣಿಕೊಪ್ಪ ವರದಿ, ಮಾ. ೧೩: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಗುರುತಿಸಿರುವ ೩೧ ಎಕರೆ ಜಾಗವನ್ನು ವಶಕ್ಕೆ ಪಡೆದು ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗೆ ಒಪ್ಪಿಸಲಾಗುವುದು ಎಂದು ಪೊನ್ನಂಪೇಟೆ ತಹಶೀಲ್ದಾರ್ ಎನ್. ಎಸ್. ಪ್ರಶಾಂತ್ ಭರವಸೆ ನೀಡಿದರು.

ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘ ಮತ್ತು ಕರ್ನಾಟಕ ಅರಣ್ಯ ಮೂಲ ಕಾರ್ಮಿಕ ಸಮುದಾಯಗಳ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಜನಾಗ್ರಹ ರ‍್ಯಾಲಿ ಮತ್ತು ಹಕ್ಕೋತ್ತಾಯ ಕಾರ್ಯಕ್ರಮದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು.

ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ೨೦ ಎಕರೆ, ಬಿರುನಾಣಿಯಲ್ಲಿ ೭, ರುದ್ರಬೀಡು ಗ್ರಾಮದಲ್ಲಿ ೪ ಎಕರೆ ಜಾಗವನ್ನು ನಿವೇಶನ ರಹಿತ ಗಿರಿಜನರಿಗೆ ನೀಡಲು ಗುರುತಿಸಲಾಗಿದ್ದು, ಒಂದು ತಿಂಗಳ ಒಳಗೆ ಜಾಗವನ್ನು ವಶಕ್ಕೆ ಪಡೆದು, ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗೆ ಒಪ್ಪಿಸಲಾಗುವುದು. ಇದರಿಂದ ಸಾಕಷ್ಟು ಸಮಸ್ಯೆಗಳು ಪರಿಹಾರ ಕಾಣಲಿವೆ ಎಂದರು. ಗಿರಿಜನ ಯೋಜನಾ ಸಮನ್ವಯ ಅದಿಕಾರಿಗಳ ಮೂಲಕ ಮುಂದಿನ ಹಸ್ತಾಂತರ ಯೋಜನೆ ನಡೆಯಲಿದೆ ಎಂದರು.

ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದ ಎದುರು ಆರಂಭಗೊAಡ ರ‍್ಯಾಲಿಯಲ್ಲಿ ೧೨೦ಕ್ಕೂ ಹೆಚ್ಚು ನಿವೇಶನ ರಹಿತ ಬುಡಕಟ್ಟು ಜನಾಂಗದವರು ರ‍್ಯಾಲಿಯಲ್ಲಿ ಪಾಲ್ಗೊಂಡರು. ಕಾಫಿ ತೋಟಗಳ ಲೈನ್‌ಮನೆ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ನಿವೇಶನ ಹಾಗೂ ವಸತಿ ರಹಿತ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ, ವಸತಿ ಹಾಗೂ ಕನಿಷ್ಟ ವೇತನವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಆಗ್ರಹಿಸಲಾಯಿತು. ೮ ತಿಂಗಳಿನಿAದ ಮಾಯಮುಡಿ ಗ್ರಾಮ ಪಂಚಾಯಿತಿ ಮತ್ತು ಪೊನ್ನಂಪೇಟೆ ಇಓ ಕಚೇರಿ ಎದುರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದನ ದೊರೆಯುತ್ತಿಲ್ಲ. ತಿಂಗಳ ಒಳಗೆ ಸ್ಪಂದಿಸದಿದ್ದಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳು ವುದಾಗಿ ಘೋಷಿಸಲಾಯಿತು. ನಂತರ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಸಿ. ಅಪ್ಪಣ್ಣ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಅರಣ್ಯ ಮೂಲ ಕಾರ್ಮಿಕ ಸಮುದಾಯಗಳ ಒಕ್ಕೂಟ ಕಾರ್ಯದರ್ಶಿ ಶೈಲೇಂದ್ರಕುಮಾರ್, ಒಕ್ಕೂಟ ಮಹಿಳಾ ಅಧ್ಯಕ್ಷೆ ಲಕ್ಷö್ಮಮ್ಮ ಹಿರೇಮನೆ, ಒಕ್ಕೂಟ ಸಂಚಾಲಕ ಪುಟ್ಟ ಬಸವಯ್ಯ, ಸಂಘದ ಕಾರ್ಯದರ್ಶಿ ಲಲಿತಾ, ಬುಡಕಟ್ಟು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ಬಿ. ಗಪ್ಪು, ಸಂಚಾಲಕ ವೆಂಕಟೇಶ್ ಇದ್ದರು.