ಸೋಮವಾರಪೇಟೆ, ಮಾ. ೧೪: ತಾಲೂಕಿನಲ್ಲಿ ಹಲವಷ್ಟು ಸಮಸ್ಯೆಗಳಿದ್ದು, ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ. ಇದರೊಂದಿಗೆ ಜಾಗದ ದಾಖಲಾತಿಗಳು ಸಮರ್ಪಕಗೊಳ್ಳದ ಹಿನ್ನೆಲೆ ರೈತಾಪಿ ವರ್ಗವೂ ಸಮಸ್ಯೆಯಲ್ಲಿದೆ. ಕಂದಾಯ ಇಲಾಖೆ ಮೂಲಕ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ತಾಲೂಕು ರೈತ ಸಂಘದ ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್ರನ್ನು ಒತ್ತಾಯಿಸಿದ್ದಾರೆ.
ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚಿಸಿದ ರೈತ ಸಂಘದ ಮುಖಂಡರು, ಸೀಮೇಎಣ್ಣೆ ಸರಬರಾಜಾಗದ ಹಿನ್ನೆಲೆ ಗ್ರಾಮೀಣ ಪ್ರದೇಶದ ಬಡವರು ಮತ್ತು ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಮಳೆಗಾಲದಲ್ಲಿ ಸೀಮೆಎಣ್ಣೆ ದೊರೆಯದಿದ್ದರೆ ಕತ್ತಲಿನಲ್ಲಿ ರಾತ್ರಿ ಕಳೆಯಬೇಕಾಗುತ್ತದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂದು ಸಂಘದ ದಯಾನಂದ್ ಮನವಿ ಮಾಡಿದರು.
ಹೂವಯ್ಯ ಮಾಸ್ಟರ್ ಮಾತನಾಡಿ, ಪೋಡಿ, ರೈತರ ಪೌತಿ ಖಾತೆ, ಬೆಳೆ ದಾಖಲು ಸರಿಯಾಗಿಲ್ಲದ್ದರಿಂದ ಸರ್ಕಾರದ ಸೌಲಭ್ಯ, ಬ್ಯಾಂಕ್ ಸಾಲ ಪಡೆಯಲು ಆಗುತ್ತಿಲ್ಲ. ಸಾವಿರಾರು ರೈತರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪೌತಿ ಖಾತೆ ಆಂದೋಲನದಡಿ ಜಾಗದ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಸರ್ಕಾರದ ಆದೇಶವಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಚಂದ್ರಶೇಖರ್ ಮಾತನಾಡಿ, ಬೆಳೆಹಾನಿ ಪರಿಹಾರ ಹಣ ಇನ್ನೂ ಸಹ ಹಲವಷ್ಟು ರೈತರ ಖಾತೆಗೆ ಜಮೆಯಾಗಿಲ್ಲ. ಈ ಹಿಂದೆ ನಡೆಯುತ್ತಿದ್ದ ಜನಸ್ಪಂದನ ಕಾರ್ಯಕ್ರಮಗಳನ್ನು ಮತ್ತೆ ಆರಂಭಿಸಬೇಕು. ಆ ಮೂಲಕ ಸ್ಥಳದಲ್ಲೇ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕೆಂದರು.
ಸAತೆ ದಿನವಾದ ಸೋಮವಾರ ದಂದು ಗ್ರಾಮೀಣ ಪ್ರದೇಶದಿಂದ ರೈತರು ಪಟ್ಟಣಕ್ಕೆ ಆಗಮಿಸಿ ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ತೆರಳುತ್ತಿದ್ದಾರೆ. ಆದರೆ ಸೋಮವಾರದಂದು ಸಭೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಿ ಅಧಿಕಾರಿಗಳು ತೆರಳುತ್ತಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಿಂದ ಆಗಮಿಸುವ ಮಂದಿ ಬರಿಗೈಯಲ್ಲಿ ತೆರಳುವಂತಾಗಿದೆ ಎಂದು ಅಧ್ಯಕ್ಷ ದಿನೇಶ್, ಲಕ್ಷö್ಮಣ್ ಗರಗಂದೂರು ಸೇರಿದಂತೆ ಇತರರು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಜಾಗಕ್ಕೆ ಸಂಬAಧಿಸಿದAತೆ ದಾಖಲಾತಿಗಳಲ್ಲಿ ಹೆಚ್ಚು ಸಮಸ್ಯೆಗಳಿವೆ. ಇವುಗಳನ್ನು ಬಗೆಹರಿಸಿಕೊಡುವಂತೆ ನೂರಾರು ಅರ್ಜಿಗಳು ಸಲ್ಲಿಕೆಯಾಗಿದ್ದರೂ ಈವರೆಗೆ ಪರಿಹಾರ ಕಂಡಿಲ್ಲ. ರೈತರ ೧೦ ಹೆಚ್ಪಿವರೆಗಿನ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂರು ವರ್ಷಗಳಿಂದ ಹೇಳುತ್ತಾ ಬರುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಚಿತ ವಿದ್ಯುತ್ ಘೋಷಣೆ ಮಾಡಿದ್ದರೂ ಈವರೆಗೆ ಅಧಿಕಾರಿಗಳು ಕಾರ್ಯರೂಪಕ್ಕೆ ತಂದಿಲ್ಲ ಎಂದು ಗರಗಂದೂರು ಲಕ್ಷö್ಮಣ್ ಸಭೆಯ ಗಮನಕ್ಕೆ ತಂದರು.
ರೈತ ಸಂಘದ ಪದಾಧಿಕಾರಿಗಳ ಅಹವಾಲುಗಳನ್ನು ಆಲಿಸಿದ ತಹಶೀಲ್ದಾರ್ ನರಗುಂದ್ ಅವರು, ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸಭೆಯಲ್ಲಿ ರೈತ ಸಂಘದ ಮುಖಂಡರಾದ ಹೆಚ್.ಬಿ. ರಾಜಪ್ಪ, ಲಿಂಗೇರಿ ರಾಜೇಶ್, ಲಕ್ಕಯ್ಯ, ಮಂದಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.