ಸಿದ್ದಾಪುರ, ಮಾ. ೧೩: ಜಾತಿ, ಮತ ನೋಡದೇ ಸಂತ್ರಸ್ತರಿಗೆ ಮನೆ ಹಸ್ತಾಂತರ ಮಾಡಿರುವುದು ಮಾನವೀಯತೆಗೆ ಸಾಕ್ಷಿ ಎಂದು ಉಲ್ಲಾಳದ ಶಾಸಕ ಯು.ಟಿ. ಖಾದರ್ ಅಭಿಪ್ರಾಯವ್ಯಕ್ತಪಡಿಸಿದರು.

ಪ್ರವಾಹ ಸಂತ್ರಸ್ತರಿಗೆ ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕ್ರೆ ಭಾಗದಲ್ಲಿ ಪೀಪಲ್ಸ್ ಫೌಂಡೇಷನ್, ಜಮಾಅತೆ ಇಸ್ಲಾಮೀ ಹಿಂದ್, ಹೆಚ್.ಆರ್.ಎಸ್ ಸಂಘಟನೆಗಳ ಸಹಯೋಗದಲ್ಲಿ ನಿರ್ಮಿಸಲಾದ ೨೫ ಮನೆಗಳ ಕೀಲಿಕೈ ಅನ್ನು ಸಂತ್ರಸ್ತರಿಗೆ ಹಸ್ತಾಂತರಿಸಿ, ಬಳಿಕ ಮಾತನಾಡಿದರು. ಎಲ್ಲಾ ಜಾತಿ ಧರ್ಮ ಸೇರಿದರೆ ಮಾತ್ರ ಭಾರತ ಆಗುತ್ತದೆ. ಸಂಘಟನೆಗಳು ಸರ್ಕಾರ

(ಮೊದಲ ಪುಟದಿಂದ) ಮಾಡಬೇಕಾದ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಮಾನವೀಯತೆಗೆ ಸಾಕ್ಷಿಯಾಗಿದೆ ಎಂದರು. ೨೦೧೮ರಲ್ಲಿ ಭೂಕುಸಿತದ ಸಂದರ್ಭ ತಾನು ವಸತಿ ಸಚಿವನಾಗಿದ್ದಾಗ ಮಡಿಕೇರಿಯ ಸಂತ್ರಸ್ತರಿಗೆ ಮನೆ ಹಸ್ತಾಂತರ ಮಾಡಿದ್ದೇವೆ. ೨೦೧೯ರ ಪ್ರವಾಹ ಸಂತ್ರಸ್ತರಿಗೆ ಮನೆಯಾಗಲಿ, ನಿವೇಶನವನ್ನು ಸರ್ಕಾರ ನೀಡಿಲ್ಲ. ಈ ನಿಟ್ಟಿನಲ್ಲಿ ಸಂಘಟನೆಗಳು ಸಂತ್ರಸ್ತರಿಗೆ ೨೫ ಮನೆಗಳನ್ನು ನೀಡುತ್ತಿರುವುದು ಶ್ಲಾಘನೀಯ. ಜಾತಿ, ಧರ್ಮವನ್ನು ನೋಡದೇ ಸಂತ್ರಸ್ತರಿಗೆ ಮನೆ ನೀಡಿರುವುದು ಸಮುದಾಯದ ಗೌರವವನ್ನು ಹೆಚ್ಚಿಸಿದೆ. ಎಲ್ಲರೂ ಕೂಡ ಸೌಹಾರ್ದತೆಯನ್ನು ಕಾಪಾಡಿಕೊಂಡು ಶಾಂತಿ ಹಾಗೂ ನೆಮ್ಮದಿಯ ಬದುಕನ್ನು ಕಂಡುಕೊಳ್ಳುವAತೆ ಸಲಹೆ ನೀಡಿದರು.

ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ‘ಪೀಪಲ್ಸ್ ವಿಲೇಜ್’ ಅನ್ನು ಉದ್ಘಾಟಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮನೆಕಳೆದುಕೊಂಡು ಸಂತ್ರಸ್ತರಾದವರಿಗೆ ಮನೆಯನ್ನು ನೀಡುತ್ತಿರುವುದು ಪುಣ್ಯದ ಕೆಲಸ. ಮನೆಗಳಲ್ಲಿ ಉತ್ತಮ ಸೌಕರ್ಯವಿದ್ದು, ಮನೆ ನೀಡಿದವರಿಗೆ ಕೃತಜ್ಞತೆ ತೋರಿಸಬೇಕು. ೨೫ ಫಲಾನುಭವಿಗಳು ಕೂಡ ಬಡಾವಣೆಯನ್ನು ನಿರ್ಮಲ ಬಡಾವಣೆಯಾಗಿ ಇಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ, ಅವರೂ ಕೂಡ ಉತ್ತಮ ಉದ್ಯೋಗ ಪಡೆದು ಇತರ ನಿರ್ಗತಿಕರಿಗೆ ಧ್ವನಿಯಾಗುವಂತೆ ಆಗಬೇಕು ಎಂದರು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು, ಸೇವೆಯನ್ನು ಮುಂದುವರೆಸಲು ಶುಭ ಹಾರೈಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯಾಧ್ಯಕ್ಷ ಎಂ.ಈ. ಅಬ್ದುಲ್ ಅಝೀಝ್ ಮಾತನಾಡಿ, ಮನೆ ಎಂಬುದು ಎಲ್ಲರ ಕನಸು. ಮನೆ ಇಲ್ಲದೇ ಲಕ್ಷಾಂತರ ಜನ ಸಂಕಷ್ಟದಲ್ಲಿದ್ದು, ಸಂತ್ರಸ್ತರಿಗೆ ಮನೆ ನೀಡುತ್ತಿರುವುದು ಉತ್ತಮ ಕಾರ್ಯ. ಬಡಾವಣೆಯಲ್ಲಿರುವ ಎಲ್ಲಾ ಕುಟುಂಬಗಳು ಸೌಹಾರ್ದತೆಯಿಂದ ಇರಬೇಕು ಎಂದರು.

ಶಾAತಿ ಪ್ರಕಾಶನ ವ್ಯವಸ್ಥಾಪಕ ಎಂ.ಹೆಚ್. ಮಹಮ್ಮದ್ ಕುಂಞÂ ಮಾತನಾಡಿ, ಮನಸ್ಸಿನಲ್ಲಿ ನೆಮ್ಮದಿ ಶಾಂತಿ ಇದ್ದರೆ ಸಮಾಜದಲ್ಲಿ ಶಾಂತಿ ಸಾಧ್ಯ. ಮನೆಗಳು ಶಾಂತಿಯ ತಾಣವಾಗಬೇಕು. ಸಂತ್ರಸ್ತರಿಗೆ ನೀಡಿರುವ ಮನೆಗಳು ಅವರ ಹಕ್ಕಾಗಿದ್ದು, ಗುಣಮಟ್ಟದ ಜೀವನ ಕಂಡುಕೊಳ್ಳುವAತಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಂ, ೨೦೧೯ರ ಪ್ರವಾಹದ ಸಂದರ್ಭ ಸಂಘಟನೆ ನಿರಂತರ ಸಾಮಾಜಿಕ ಕಾರ್ಯದಲ್ಲಿ ತೊಡಗಿತ್ತು. ಸಂತ್ರಸ್ತರಿಗೆ ಬೇಕಾದ ಆಹಾರ ಕಿಟ್‌ಗಳು, ತಾತ್ಕಾಲಿಕ ಶೆಡ್‌ಗಳು ಸೇರಿದಂತೆ ವಿವಿಧ ಸಾಮಾಜಿಕ ಕೆಲಸವನ್ನು ಮಾಡಲಾಗಿತ್ತು. ದಾನಿಗಳ ಸಹಕಾರದೊಂದಿಗೆ ೨ ಎಕರೆ ಜಾಗವನ್ನು ಖರೀದಿಸಿದ್ದು, ೨೫ ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಮತ್ತಷ್ಟು ಮನೆಗಳನ್ನು ನಿರ್ಮಿಸುವ ಗುರಿ ಇದ್ದು, ಎಲ್ಲರ ಸಹಕಾರವನ್ನು ಕೋರಿದರು.

ಈ ಸಂದರ್ಭ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಬೆಗ್ಗಾಮಿ ಮಹಮ್ಮದ್ ಸಾಬ್, ಕೇರಳ ರಾಜ್ಯದ ಉಪಾಧ್ಯಕ್ಷ ಪಿ. ಮುಜೀಬರ‍್ರಹ್ಮಾನ್, ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಆಲಿ ಉಡುಪಿ, ಕೇರಳದ ಪೀಪಲ್ಸ್ ಫೌಡೇಷನ್ ಅಧ್ಯಕ್ಷ ಎಂ.ಕೆ ಮಹಮ್ಮದ್ ಆಲಿ, ಕಾಂಗ್ರೆಸ್ ಮುಖಂಡ ಡಾ. ಮಂತರ್ ಗೌಡ, ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷ ಎ.ಕೆ. ಹಕೀಂ, ಪಿ.ಡಿ.ಓ ಅನಿಲ್ ಕುಮಾರ್, ಪ್ರಮುಖರಾದ ಬಾಳೆಯಡ ದಿವ್ಯ ಮಂದಪ್ಪ, ಅಮೀನ್ ಮೊಹಿಸಿನ್, ವಿ.ಪಿ. ಶಶಿಧರ್, ಪವನ್ ಪೆಮ್ಮಯ್ಯ, ಕೆ.ಯು. ಮಜೀದ್ ಸೇರಿದಂತೆ ಇನ್ನಿತರರು ಇದ್ದರು.

ಅಬ್ದುಲ್ ಸಲಾಂ ಸ್ವಾಗತಿಸಿ, ಬಷೀರ್ ಹಾಗೂ ಸಲೀಂ ಬೊಳಂಗಡಿ ನಿರೂಪಿಸಿ, ಅಬ್ದುಲ್ ರೆಹಮಾನ್ ವಂದಿಸಿದರು.

ಚಿತ್ರ, ವರದಿ: ಎ.ಎನ್ ವಾಸು