ಮಡಿಕೇರಿ, ಮಾ. ೧೪: ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿವೆ. ಆ ಮೂಲಕ ಮತದಾರರನ್ನು ಭ್ರಷ್ಟರನ್ನಾಗಿಸುತ್ತಿವೆ ಎಂದು ಆರೋಪಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ಸಂಬAಧ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ಕೂಡ ಜಾತ್ಯತೀತ ಪಕ್ಷಗಳ ಅಭ್ಯರ್ಥಿಗಳು ಬಿಜೆಪಿಗೆ ಸೇರಲಾರರು ಎಂಬುದಕ್ಕೆ ಯಾವುದೇ ಖಾತರಿಯಿಲ್ಲ. ಸುಮಾರು ೩೦ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇದೆ. ಕಳೆದ ಬಾರಿ ರಾಜ್ಯದ ಎರಡು ಕಡೆ ಮಾತ್ರ ಸ್ಪರ್ಧಿಸಿ ಜಾತ್ಯತೀತ ಶಕ್ತಿಗಳಿಗೆ ಬೆಂಬಲ ನೀಡಿದ್ದೆವು. ಆದರೆ ಆಯ್ಕೆಯಾದ ಬಳಿಕ ಜಾತ್ಯತೀತ ಪಕ್ಷಗಳ ಹಲವಾರು ಶಾಸಕರುಗಳು ಬಿಜೆಪಿಗೆ ಸೇರಿದರು. ಕಾಂಗ್ರೆಸ್ ಪಕ್ಷಕ್ಕೆ ತನ್ನ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳುವ ಸಾರ್ಮರ್ಥ್ಯ ಇಲ್ಲವೆಂದು ಅಬ್ದುಲ್ ಮಜೀದ್ ಟೀಕಿಸಿದರು.

ಎಸ್‌ಡಿಪಿಐ ಸ್ಪರ್ಧೆಯಿಂದ ಜಾತ್ಯತೀತ ಮತಗಳ ವಿಭಜನೆ ಆಗುತ್ತದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ಚರ್ಚೆ ಮಾಡುತ್ತಿರುವವರು ಕಾಂಗ್ರೆಸ್ ಶಾಸಕರುಗಳು ಬಿಜೆಪಿಗೆ ಸೇರಿದಾಗ ಯಾಕೆ ಧ್ವನಿ ಎತ್ತಲಿಲ್ಲ ಎಂದು ಅವರು ಪ್ರಶ್ನಿಸಿದರಲ್ಲದೆ ಚುನಾವಣೆಗೆ ಸ್ಪರ್ಧಿಸಲು ನಮ್ಮ ಪಕ್ಷಕ್ಕೆ ನೈತಿಕತೆ ಇದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಕಡುಭ್ರಷ್ಟ ಸರ್ಕಾರವಾಗಿದೆ ಎಂದು ದೂರಿದ ಅವರು, ರಾಜ್ಯದ ಅಧಿಕೃತ ಗುತ್ತಿಗೆದಾರರ ಸಂಘದ ಅಧ್ಯಕ್ಷರೆ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದರೂ ಕೂಡ ಇದುವರೆಗೆ ಅವರು ಅದಕ್ಕೆ ಉತ್ತರ ನೀಡಿಲ್ಲ.

ಬಿಜೆಪಿಯಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬುದನ್ನು ಮರೆಮಾಚಲು ಹಿಜಾಬ್, ಹಲಾಲ್ ನಂತಹ ವಿಚಾರಗಳನ್ನು ಮುಂದಿಡಲಾಗುತ್ತಿದೆ ಎಂದು ದೂರಿದರು. ದಿಡ್ಡಳ್ಳಿ ಹೋರಾಟ, ಮಳೆ ಹಾನಿಯಾದಾಗ ಪರಿಹಾರ ಕೇಂದ್ರ ಆರಂಭ, ರಕ್ಷಣಾ ಕಾರ್ಯಾಚರಣೆ, ಕೋವಿಡ್ ಸಮಯದಲ್ಲಿ ಮೃತರ ಅಂತಿಮ ಸಂಸ್ಕಾರದAತಹ ಹಲವಾರು ಜನಪರ ಕೆಲಸಗಳನ್ನು ಎಸ್‌ಡಿಪಿಐ ಮಾಡಿದೆ. ಮಡಿಕೇರಿ ನಗರಸಭೆಯಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿದೆ. ಈ ಬಾರಿ ಚುನಾವಣೆಗೆ ಮಡಿಕೇರಿ ಕ್ಷೇತ್ರದಿಂದ ನಗರಸಭೆ ವಿಪಕ್ಷ ನಾಯಕ ಅಮಿನ್ ಮೊಹಿಸಿನ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ.

ವೀರಾಜಪೇಟೆ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಅಂತಿಮವಾಗಿಲ್ಲ ಎಂದು ತಿಳಿಸಿದರು.

ಪಕ್ಷದ ಅಭ್ಯರ್ಥಿ ಅಮಿನ್ ಮೊಹಿಸಿನ್ ಮಾತನಾಡಿ ಜಿಲ್ಲೆ ಎರಡೂವರೆ ದಶಕಗಳಿಂದ ಒಂದೇ ಪಕ್ಷದ ಕೈಯಲ್ಲಿದೆ. ಶಾಸಕರುಗಳಿಗೆ ಬಡವರ ಪರವಾಗಿ ಕಾಳಜಿ ಇಲ್ಲ. ನಾವು ಕೈಗೊಂಡ ದಿಡ್ಡಳ್ಳಿ ಹೋರಾಟ ಫಲವಾಗಿ ೫೨೮ ಆದಿವಾಸಿಗಳಿಗೆ ಸೂರು ಸಿಕ್ಕಿದೆ. ಬಳಿಕ ಸಾವಿರ ಆದಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಸರ್ಕಾರ ಇದುವರೆಗೆ ಒಂದೇ ಒಂದು ನಿವೇಶನ ನೀಡಿಲ್ಲ. ಜಿಲ್ಲಾಧಿಕಾರಿ ಕಚೇರಿಯ ೭ ಕೋಟಿಯ ತಡೆಗೋಡೆ ಕುಸಿತವೇ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಜಮ್ಮಾಬಾಣೆ ಸಮಸ್ಯೆ ಇಂದಿಗೂ ಪರಿಹಾರವಾಗಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲೂ ಕೊಡಗು ಚಲೊ ರೀತಿಯ ಪ್ರಬಲ ಹೋರಾಟ ಮಾಡಲು ಸಾಧ್ಯವಾಗದ ಕಾಂಗ್ರೆಸ್‌ಗೆ ಜನರಿಗಾಗಿ ಏನು ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿದ ಅವರು ಮೂವರು ಸಚಿವರುಗಳಿದ್ದ ಕೊಡಗಿನಲ್ಲಿ ಕಾಂಗ್ರೆಸ್ ಅಧೊಗತಿಗೆ ತಲುಪಿದೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಸುಂಟಿಕೊಪ್ಪ, ನಗರಸಭಾ ಸದಸ್ಯೆ ಮೇರಿ ವೇಗಸ್ ಉಪಸ್ಥಿತರಿದ್ದರು.