ಕಣಿವೆ, ಮಾ. ೧೪: ಈ ಬಾರಿ ಮಾರ್ಚ್ ಎರಡನೇ ವಾರ ಕಳೆದರೂ ಕೂಡ ಕುಶಾಲನಗರ ವ್ಯಾಪ್ತಿಯಲ್ಲಿ ಮಳೆ ಬಾರಲೇ ಇಲ್ಲ. ಹಾಗಾಗಿ ಅತೀವ ಬಿಸಿಲ ತಾಪಕ್ಕೆ ಭೂಮಿ ಕಾದು ನಿಂತಿದೆ. ಜಾನುವಾರುಗಳಿಗೆ ಹಸಿರು ಹುಲ್ಲು ಕೂಡ ಕಾಣದೇ ಇರುವುದರಿಂದ ಜಾನುವಾರುಗಳು ಮೇವಿಗೆ ಪರದಾಡುವಂತಾಗಿದೆ. ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನಾಲ್ಕೆöÊದು ಬಾರಿ ಮಳೆ ಸುರಿದು ಭೂಮಿಯನ್ನು ತಂಪಾಗಿಸಿತ್ತು. ಮಳೆ ಉತ್ತಮವಾಗಿ ಸುರಿದ ಕಾರಣ ಶುಂಠಿ ಕೃಷಿಕರು ಕಳೆದ ವರ್ಷ ಫೆಬ್ರವರಿ ಮಾಸಾಂತ್ಯ ಹಾಗೂ ಮಾರ್ಚ್ ಆರಂಭದಲ್ಲಿ ಬಹುತೇಕ ಪ್ರಮಾಣದಲ್ಲಿ ಶುಂಠಿ ಬಿತ್ತನೆಗೈದಿದ್ದರು.

ಈ ಬಾರಿ ಭೂಮಿಯ ಕಾವು ಏರಿರುವುದರಿಂದ ಶುಂಠಿ ಬಿತ್ತನೆಗೆ ಕೃಷಿಕರು ಮಳೆಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ.

ಕಳೆದ ಅನೇಕ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಯಥೇಚ್ಛ ಪ್ರಮಾಣದಲ್ಲಿ ಬಿಸಿಲು ಆರ್ಭಟಿಸುತ್ತಿದೆ.

ಕೊಳವೆ ಬಾವಿ ಅಳವಡಿಸಿಕೊಂಡಿರುವ ಕೃಷಿಕರು ಹಾಗೂ ನದಿ ಮೂಲಗಳ ನೀರನ್ನು ಕೃಷಿಗೆ ಅವಲಂಬಿಸಿರುವವರು ಎಷ್ಟೇ ಪ್ರಮಾಣದಲ್ಲಿ ನೀರನ್ನು ಮೇಲೆತ್ತಿ ಭೂಮಿಗೆ ಹರಿಸಿದರೂ ಕೂಡ ಕ್ಷಣಾರ್ಧದಲ್ಲಿ ತಂಪನೆಯ ವಾತಾವರಣ ಮಾಯವಾಗುತ್ತಿದೆ.

-ಮೂರ್ತಿ