ನಾಪೋಕ್ಲು, ಮಾ. ೧೪: ಕಾಫಿ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ತೋಟ ಬೆಂಕಿಗೆ ಆಹುತಿಯಾದ ಘಟನೆ ಸಮೀಪದ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಜಿ ಸೈನಿಕ ಬಿಲ್ಲವರ ಪೂವಪ್ಪ ಅವರ ಕಾಫಿ ತೋಟ ಬೆಂಕಿಗೆ ಆಹುತಿಯಾಗಿದ್ದು, ನಷ್ಟ ಉಂಟಾಗಿದೆ.

ಬಿಲ್ಲವರ ಪೂವಪ್ಪ ನಿವೃತ್ತಿಯ ನಂತರ ಮರಂದೋಡ ಗ್ರಾಮದಲ್ಲಿ ಕಾಫಿ ಕೃಷಿ ಮಾಡಿಕೊಂಡಿದ್ದು, ೧೫ ವರ್ಷದ ಗಿಡಗಳು ಇಳುವರಿ ನೀಡುತ್ತಿದ್ದವು. ನಾಲ್ಕೆöÊದು ವರ್ಷಗಳಿಂದ ಉತ್ತಮ ಇಳುವರಿ ನೀಡುತ್ತಿದ್ದು, ಕಳೆದೆರಡು ದಿನಗಳ ಹಿಂದೆ ಆಕಸ್ಮಿಕವಾಗಿ ಬೆಂಕಿತಗುಲಿ ಗಿಡಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಕಾಫಿ ತೋಟದ ಗಿಡಗಳು ಬೆಂಕಿಗೆ ಆಹುತಿಯಾಗಿ ನಷ್ಟ ಸಂಭವಿಸಿದೆ. ಸುಮಾರು ಮೂರು ಎಕರೆಯಷ್ಟು ತೋಟ ಹಾನಿಯಾಗಿದೆ. ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.