ಮಡಿಕೇರಿ, ಮಾ. ೧೩: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಐ. ಭವಾನಿ ಅವರ ಪುತ್ರಿ ಸೌಮ್ಯ (೩೯) ಕಳೆದ ಎರಡು ವಾರಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.

ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮರಣ ಹೊಂದಿದ ಸೌಮ್ಯಳ ತಾಯಿ ಭವಾನಿ ಮಡಿಕೇರಿಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೌಮ್ಯಳನ್ನು ೧೫ ವರ್ಷಗಳ ಹಿಂದೆ ಕಗ್ಗೋಡ್ಲು ಗ್ರಾಮದ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಬಿ.ಕೆ. ಅರುಣ ಅವರಿಗೆ ವಿವಾಹ ಮಾಡಿ ಕೊಟ್ಟಿದ್ದು, ಕಳೆದ ೨೦೨೨ ಮೇ ತಿಂಗಳಿನಿAದ ಮಡಿಕೇರಿಯ ಚೆಸ್ಕಾಂ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಸಂದರ್ಭ ಇಲಾಖೆಯ ಮೇಲಾಧಿಕಾರಿ ವಿನಯ್ ಎಂಬುವವರು ವಿನಾಕಾರಣ ಕಿರುಕುಳ ನೀಡಿ ಮಗಳಿಗೆ ಕರೆ ಮಾಡು ಮತ್ತು ಸಂದೇಶಗಳನ್ನು ಕಳುಹಿಸು ಎಂದು ಪೀಡಿಸುತ್ತಿದ್ದರು.

ಇದರಿಂದ ನೊಂದ ಸೌಮ್ಯ ತನ್ನ ಗಂಡನ ಮನೆ ಕಗ್ಗೋಡ್ಲುವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅವಳನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಯನ್ನು ಮಂಗಳೂರಿನಲ್ಲಿ ನೀಡಿ ಬಳಿಕ ಮಡಿಕೇರಿಗೆ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿರುತ್ತಾಳೆ. ಅಧಿಕಾರಿಯ ಕಿರುಕುಳದಿಂದ ಮಗಳು ಸಾವನ್ನಪ್ಪಿರುತ್ತಾಳೆ. ಮೇಲಾಧಿಕಾರಿ ವಿನಯ್ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ ೩೦೬ ಅಡಿಯಲ್ಲಿ ಪ್ರಕರಣ ದಾಖಲಿಸಿ ಮಡಿಕೇರಿ ಗ್ರಾಮಾಂತರ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿರುತ್ತಾರೆ.