ಸೋಮವಾರಪೇಟೆ, ಮಾ. ೧೨: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಕ್ತದ ಕೊರತೆ ಕಂಡು ಬಂದಿದ್ದು, ಆರೋಗ್ಯವಂತ ದಾನಿಗಳು ರಕ್ತ ದಾನ ಮಾಡುವುದರಿಂದ ರಕ್ತದ ಕೊರತೆ ನೀಗಿಸಲು ಸಾಧ್ಯ ಎಂದು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ ಹೇಳಿದರು. ತಥಾಸ್ತು ಸಾತ್ವಿಕ ಸಂಸ್ಥೆ ಮತ್ತು ಅಬಕಾರಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ರಕ್ತದ ಸಮಸ್ಯೆ ಇರುತ್ತಿರಲಿಲ್ಲ. ಹೊರ ಜಿಲ್ಲೆಯ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ೪ ರಕ್ತ ಸಂಗ್ರಹ ಕೇಂದ್ರ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ದೊರಕುತ್ತಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ ೫೦೦ ಯೂನಿಟ್ ರಕ್ತದ ಅವಶ್ಯಕತೆ ಇದೆ. ಜಿಲ್ಲೆಯ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು ರಕ್ತದಾನದಂತಹ ಮಹತ್ಕಾರ್ಯ ಕೈಗೊಂಡರೆ ರೋಗಿಯ ಜೀವ ಉಳಿಸಿದಂತಾಗುತ್ತದೆ ಎಂದರು.
ಅಬಕಾರಿ ಇಲಾಖೆಯ ನಿರೀಕ್ಷಕ ಲೋಕೇಶ್ ಸುವರ್ಣ ಮಾತನಾಡಿ, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುವುದಲ್ಲದೆ ಇನ್ನೊಬ್ಬರ ಜೀವಕ್ಕೂ ರಕ್ಷಣೆ ನೀಡಿದಂತಾಗುತ್ತದೆ ಎಂದರು. ಶಸ್ತçಚಿಕಿತ್ಸಕ ಸತೀಶ್, ತಥಾಸ್ತು ಸಾತ್ವಿಕ ಸಂಸ್ಥೆಯ ಅಧ್ಯಕ್ಷ ಉದಯ ಮಾಳವ, ಶಿವಕುಮಾರ್, ಗಿರೀಶ್, ಮಡಿಕೇರಿ ರಕ್ತ ನಿಧಿ ಕೇಂದ್ರದ ವೈದ್ಯರಾದ ಸಂಧ್ಯಾ ಮತ್ತಿತರರು ಇದ್ದರು.