ಪೊನ್ನಂಪೇಟೆ. ಮಾ. ೧೨: ತಾಯಿ ಮಗುವಿನ ಆರೈಕೆ, ಹದಿಹರೆಯದ ವಯಸ್ಸಿನ ಸಮಸ್ಯೆ ಹಾಗೂ ಆಯುಷ್ ಮಾನ್ ಭಾರತ್ ಯೋಜನೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಬೀದಿ ನಾಟಕ ಕಾರ್ಯಕ್ರಮಕ್ಕೆ ಇತ್ತೀಚೆಗೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಪೊನ್ನಂಪೇಟೆಯ ಜೈ ಭೀಮ್ ಗಡಿನಾಡು ಜನಪದ ಕಲಾ ತಂಡದ ಸದಸ್ಯರು ಬೀದಿ ನಾಟಕ ನಡೆಸಿಕೊಟ್ಟರು. ತಂಡದ ನಾಯಕ ಎಸ್.ಟಿ. ಗಿರೀಶ್, ಸದಸ್ಯರಾದ ನಿರ್ಮಲ, ಶರತ್ ಕುಮಾರ್, ಮಂಜುಳಾ, ಪುಷ್ಪ, ವೈರಮುಡಿ, ಹೊನ್ನೇಶ, ಶೇಖರ್ ಮತ್ತು ಅರುಣ್ ನಾಟಕದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ. ಗ್ರೀಷ್ಮ, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಇದ್ದರು.