ಕುಶಾಲನಗರ, ಮಾ. ೧೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆಗಳ ಮೂಲಕ ಸಮಾಜದಲ್ಲಿ ಬೃಹತ್ ಬದಲಾವಣೆ ಕಂಡು ಬಂದಿದೆ ಎಂದು ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ನಡೆದ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯಲ್ಲಿ ೨೦೨೨-೨೩ನೇ ವರ್ಷದ ಕ್ರಿಯಾ ಯೋಜನೆಯ ಮತ್ತು ಅನುದಾನದ ಕುರಿತು ಮಾಹಿತಿ ನೀಡಿ ಮಾತನಾಡಿದರು. ಮದ್ಯವರ್ಜನ ಶಿಬಿರಗಳ ಮೂಲಕ ಲಕ್ಷಾಂತರ ಸಂಖ್ಯೆಯ ಮದ್ಯ ವ್ಯಸನಿಗಳನ್ನು ಪಾನಮುಕ್ತ ರಾಗಿಸುವುದರೊಂದಿಗೆ ಶಾಶ್ವತ ಪರಿಹಾರ ಶಿಬಿರಗಳ ಮೂಲಕ ಲಭಿಸಿದೆ. ವಲಯಕ್ಕೊಂದು ನವ ಜೀವನ ಸಮಿತಿ ನಿರ್ಮಾಣ ಮಾಡುವುದರೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣದ ಕಲ್ಪನೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮೂಲಕ ಆಗಲಿದೆ ಎಂದರು. ಎಲ್ಲಾ ವಲಯ ಹಂತಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಮತ್ತು ಗ್ರಾಮಗಳ ಅಭಿವೃದ್ಧಿಗೆ ಕ್ರಿಯಾಯೋಜನೆ, ಶಿಬಿರಗಳು ನಡೆಯಲಿವೆ ಎಂದರು. ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ವ್ಯಾಪ್ತಿಯ ಸಮಗ್ರ ವರದಿಯನ್ನು ಅರಕಲಗೂಡು, ಪಿರಿಯಾಪಟ್ಟಣ, ಸೋಮವಾರಪೇಟೆ, ಮತ್ತಿತರ ವ್ಯಾಪ್ತಿಯ ಯೋಜನೆ ಅಧಿಕಾರಿಗಳು ನೀಡಿದರು. ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಹೊನ್ನವಳ್ಳಿ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ನೂತನ ಅಧ್ಯಕ್ಷರಾಗಿ ಸೋಮವಾರಪೇಟೆಯ ಹಿರಿಯ ವಕೀಲ ಪಿ. ಅಭಿಮನ್ಯು ಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರಂಗಸ್ವಾಮಿ ಅವರ ಆಯ್ಕೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಪಿ. ಅಭಿಮನ್ಯು ಕುಮಾರ್ ಜನ ಜಾಗೃತಿ ವೇದಿಕೆಯ ಮೂಲಕ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ಒದಗಿಸಿದರು. ಮುಂಬರುವ ಚುನಾವಣೆ ಮದ್ಯಮುಕ್ತವಾಗುವಂತೆ ಪ್ರತಿಯೊಬ್ಬರೂ ಜಾಗೃತರಾಗ ಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಭ್ಯರ್ಥಿಗಳು ಮತಕ್ಕಾಗಿ ಮದ್ಯ ಮತ್ತಿತರ ಆಮಿಷಗಳನ್ನು ಒಡ್ಡದಂತೆ ಸಮಿತಿಯ ಪ್ರಮುಖರು ಗಮನಿಸುವಂತೆ ಸಲಹೆ ನೀಡಿದರು. ಈ ಸಂದರ್ಭ ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಕಾರ್ಯದರ್ಶಿ ಲೀಲಾವತಿ, ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಬಾನಂಗಡ ಅರುಣ್, ವೇದಿಕೆಯ ಸದಸ್ಯರು, ಯೋಜನಾಧಿಕಾರಿಗಳು ಇದ್ದರು