ವೀರಾಜಪೇಟೆ ಪಟ್ಟಣದಿಂದ ಸುಮಾರು ೭ ಕಿ.ಮೀ. ದೂರದಲ್ಲಿರುವ ಶ್ರೀ ಅರಮೇರಿ ಕಳಂಚೇರಿ ಮಠದ ಇತಿಹಾಸವು ಹಾಲೇರಿ ವಂಶದ ರಾಜರು ಕೊಡಗನ್ನು ಆಳುತ್ತಿದ್ದ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಅಧ್ಯಾತ್ಮಿಕ ಕ್ಷೇತ್ರವಾಗಿಯೂ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಪ್ರತಿಷ್ಟಿತ ಸ್ಥಾನವನ್ನು ತನ್ನದಾಗಿಸಿಕೊಂಡು ಜನಮನ್ನಣೆಗಳಿಸಿದೆ. ದಕ್ಷಿಣ ಕೊಡಗನ್ನು ಧರ್ಮಮುಖಿಯನ್ನಾಗಿಸಿದ ಶ್ರೀ ಅರಮೇರಿ ಮಠ, ಗುರುಪರಂಪರೆ ಹೊಂದಿ ಧರ್ಮ ಸಂಸ್ಕೃತಿ ಆದರ್ಶಗಳನ್ನು ಎತ್ತಿ ಹಿಡಿದಿದೆ. ಜನಸಮುದಾಯದಲ್ಲಿ ಭಕ್ತಿ, ಜ್ಞಾನ ಅನುಭಾವ ದಾಸೋಹ, ಕಾಯಕ ಮೊದಲಾದವುಗಳ ಬಗೆಗೆ ಅಭಿರುಚಿ ಆಸಕ್ತಿ ಬೆಳೆಸಿದ್ದನ್ನು ಶ್ರೀಮಠದ ಇತಿಹಾಸದಿಂದ ತಿಳಿಯಬಹುದು.
ಕೊಡಗಿನ ಪ್ರತಿಷ್ಠಿತ ಹಾಲೇರಿ ವಂಶದ ನಾಲ್ಕನೇಯ ಅರಸರಾಗಿದ್ದ ಸಿರಿಬಾಯಿ ದೊಡ್ಡಲಿಂಗರಾಜರು ಸಮಾಜೋಧಾರ್ಮಿಕ ಕಾರಣವೊಂದರಿAದ ೧೮೧೨ರಲ್ಲಿ ಸಂಸ್ಥಾಪಿಸಿದ ಧಾರ್ಮಿಕ ಕೇಂದ್ರವಾದ ಈ ಮಠ ಮುನ್ನೂರು ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಹೊಂದಿದೆ. ಕೊಡಗು ಆಂಗ್ಲರ ವಶವಾದ ತರುವಾಯದಲ್ಲೂ, ತದನಂತರದಲ್ಲೂ ಆಂಗ್ಲರಿAದಲೇ ಶ್ಲಾಘಿಸಲ್ಪಟ್ಟಿದ ಶ್ರೀಮಾನ್ ಮಹಾರಾಜ ಲಿಂಗರಾಜ ಒಡೆಯರಿಂದ ೧೮೧೨ರಲ್ಲಿ ಶ್ರೀಮಠ ಸ್ಥಾಪಿಸಲ್ಪಟ್ಟಿತ್ತು. ಲಿಂಗರಾಜೇAದ್ರ ಒಡೆಯರ ತಂಗಿ ನೀಲಮ್ಮಾಜಿಯನ್ನು ಬೆಪ್ಪುನಾಡಿನ ಯುವಕನೊಂದಿಗೆ ವಿವಾಹ ಮಾಡಿಕೊಡುತ್ತಾರೆ. ಯುದ್ದವೊಂದರಲ್ಲಿ ಗಂಡನನ್ನು ಕಳೆದುಕೊಂಡು ಚಿಕ್ಕ ವಯಸ್ಸಿನಲ್ಲೇ ಪ್ರಾಪ್ತವಾದ ಅಕಾಲ ವೈದವ್ಯದಿಂದ ವಿಚಲಿತನಾದ ಅರಸು ಆಕೆಯ ಮನಸ್ಸನ್ನು ಆಧ್ಯಾತ್ಮಿಕದತ್ತ ತಿರುಗಿಸಿ ಮಿಕ್ಕ ಬದುಕನ್ನು ಸಹನೀಯಗೊಳಿ ಸಲು ಆಗಿನ ಅರಮನೆ ಕೇರಿ(ಅರಮೇರಿ)ಜಹಗೀರ್ ಭೂಮಿಯನ್ನು ನೀಡಿ ವೀರಾಜಪೇಟೆ ವಿರಕ್ತ ದೊಡ್ಡಮಠ ಚಿಕ್ಕಮಠ (ಜಪದಕಟ್ಟೆ ಮಠ)ಮತ್ತು ಅರಮೇರಿ ಕಳಂಚೇರಿ ಮಠವನ್ನು ಏಕಕಾಲಕ್ಕೆ ಸ್ಥಾಪಿಸಿದರು.
ಪಾದಯಾತ್ರಿಗಳಾಗಿ ತಲಕಾವೇರಿ ಕ್ಷೇತ್ರ ಇತರೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುತ್ತಿದ್ದ ಭಕ್ತಾದಿಗಳಿಗೆ ನಿತ್ಯದಾಸೋಹ, ಧರ್ಮೋಪದೇಶ ಮಾಡುತ್ತ ತನ್ನ ನೈಜ ವಿರಕ್ತ ಪರಂಪರೆಯ ಮಹಾಸೇತುವಾಗಿ ಮಹಾರಾಜರಿಂದ ಅಪರಿಮಿತ ಗೌರವ ಸನ್ಮಾನಗಳನ್ನು ಪಡೆದುಕೊಂಡು ಶ್ರೀ.ಮ.ನಿ.ಪ್ರ.ಸ್ವ.ಚ. ಮೂ.ಶ್ರೀ ಸೋಮಶೇಖರ ಸ್ವಾಮಿಗಳು ನೇರ ಅರಮನೆ ಸಂಪರ್ಕವನ್ನು ಪಡೆದುಕೊಂಡು ರಾಜ ಗುರುವಾಗಿದ್ದರು. ರಾಜರಿಗೆ ಮಾರ್ಗದರ್ಶಿಯಾಗಿ ಲೋಕ ಕಲ್ಯಾಣವನ್ನೇ ತಮ್ಮ ತಪಸ್ಸನ್ನಾಗಿಸಿಕೊಂಡಿದ್ದ ಪೂಜ್ಯರ ಮಾರ್ಗದರ್ಶನಕ್ಕೆ ಮಹಾರಾಜರು ಆಗಿಂದಾಗೆ ಶ್ರೀಮಠಕ್ಕೆ ಭೇಟಿ ನೀಡುತ್ತಿದ್ದುದರಿಂದ ಇದು ಅರಮನೆ ಕೇರಿ ಎಂದು ಪ್ರಸಿದ್ಧಿ ಪಡೆಯಿತು. ಈ ಗುರುಪರಂಪರೆಯಲ್ಲಿ ಎರಡನೆಯ ಗುರುಗಳಾಗಿ ಶ್ರೀ ಗುರುಲಿಂಗ ದೇಶಿಕೇಂದ್ರಸ್ವಾಮಿಗಳು, ಮೂರನೆಯವರಾಗಿ ಶ್ರೀ ನಂಜುAಡಸ್ವಾಮಿಗಳು, ನಾಲ್ಕನೇಯವರಾಗಿ ಶ್ರೀ ಇಮ್ಮಡಿ ಸೋಮಶೇಖರ ಸ್ವಾಮಿಗಳು, ಐದನೆಯವರಾಗಿ ಶ್ರೀ ದೊಡ್ಡಮಹಂತಪ್ಪಸ್ವಾಮಿಗಳು ಶ್ರೀಮಠವನ್ನು ಅಧ್ಯಾತ್ಮವಾಗಿ ಬೆಳೆಸಿದರೆಂದು ತಿಳಿದುಬರುತ್ತದೆ. ಸುಮಾರು ೧೯ನೇ ಶತಮಾನ ಪೂರ್ವಾರ್ಧದವರೆಗೆ ಶ್ರೀಮಠ ಕೊಡಗಿನ ಮಹಾರಾಜರಿಂದ ಅತ್ಯಂತ ಶ್ರದ್ಧೆಯಿಂದ ಗೌರವಿಸಲ್ಪಡುತ್ತಿತ್ತು. ಕ್ರಮೇಣ ಅಭೇದ್ಯವಾದ ಕಾಡು ಮಠದ ಭೂಮಿಯನ್ನು ಆವರಿಸತೊಡಗಿತು. ಇದೇ ಸ್ಥಿತಿ ೨೦ನೇ ಶತಮಾನದ ಮಧ್ಯಭಾಗದವರೆಗೂ ಮುಂದುವರೆದು ಮಠದ ಇರುವಿಕೆ ಬಗ್ಗೆ ಸಂಶಯ ಉಂಟಾಗುವ ಸನ್ನಿವೇಶಗಳು ನಿರ್ಮಾಣವಾದವು. ಗೊಂಡಾರಣ್ಯವಾಗಿದ್ದ ಈ ಸ್ಥಳವನ್ನು ತಮ್ಮ ತಪೋಭೂಮಿಯನ್ನಾಗಿಸಿಕೊಂಡವರೆAದರೆ ಕ್ರಿ.ಶ. ೧೯೪೬ರಲ್ಲಿ ಆರನೆಯವರಾಗಿ ಪಟ್ಟಕ್ಕೆ ಬಂದ ಶ್ರೀಶ್ರೀ ಶಾಂತಮಲ್ಲ ಸ್ವಾಮಿಯವರು. ಸರಳರು, ಕಾಯಕನಿಷ್ಠರೂ ಆಗಿದ್ದ ಪೂಜ್ಯರು ತಮ್ಮ ದೈಹಿಕ ಶ್ರಮದಿಂದ ತಮ್ಮ ವಾಸಕ್ಕೆ ಈಗಿನ ಸ್ಥಳದಲ್ಲಿ ಸಣ್ಣ ಗುಡಿಸಲನ್ನು ನಿರ್ಮಿಸಿಕೊಂಡು ಸುತ್ತಲಿನ ಕಾಡನ್ನು ನಂದನವನವಾಗಿಸುವ ದೀಕ್ಷೆಯನ್ನು ಕೈಗೊಂಡರು.
ತಾವು ಕೈಗೊಂಡ ದೀಕ್ಷೆಯನ್ನು ಹುಸಿಗೊಳಿಸದೆ ಶರಣ ತತ್ವ ಮಂಥನದ ಅಮೃತಫಲವನ್ನು ಕಾಯಕವೊಂದನ್ನೇ ನಂಬಿ ಆಚರಿಸಿ ಕಾಡನ್ನು ತೋಟ ಗದ್ದೆಗಳನ್ನಾಗಿ ಮಾರ್ಪಡಿಸುವಲ್ಲಿ ಯಶಸ್ವಿಯಾದರು. ಅವಗಣನೆಗೊಳಗಾಗಿ, ಅಪ್ರಯೋಜಕವಾಗಿದ್ದ ಭೂಮಿಯನ್ನು ಹಸನಗೊಳಿಸಿದಂತೆ ತಮ್ಮ ಸಾಮರ್ಥ್ಯ ಕ್ಕನುಗುಣವಾಗಿ ದಾರಿದ್ರö್ಯವನ್ನು ತೊಡೆಯುವ ಉದಾತ ನಿಲುವುಗಳು ಜನ್ಮ ತಳೆದವು. ಹಾಗಾಗಿ ಅನಾಥ ಮಕ್ಕಳಿಗೆ ಅಭಯ ನೀಡಿ, ಮಠದ ಸಾತ್ವಿಕ ಆದರ್ಶಗಳೊಂದಿಗೆ ಬೆಳೆಸಿ ಪುನಃ ಸಮಾಜದ ಮುಖ್ಯ ವಾಹಿನಿಗೆ ಸೇರಿಸಲು ಕಾಯಕವನ್ನು ತದಾತ್ಮಭಾವದಿಂದ ಮಾಡಿದರು. ನಿರುದ್ಯೋಗಿಗಳಾಗಿ ಉದ್ಯೋಗವನ್ನು ಅರಸಿಕೊಂಡು ಬಂದವರಿಗೆ, ಬದುಕಿನ ಸಂಕಷ್ಟದಲ್ಲಿ ಗೊಂದಲಕ್ಕೊಳಗಾದ ದುರ್ಬಲರಿಗೆ, ತಾತ್ಕಾಲಿಕ ನೆಲೆಯನ್ನು ಕಲ್ಪಿಸಿ ಮನಸ್ಸಿನ ದುಗುಡದ ಹೊರೆಯನ್ನು ಇಳಿಸುವಲ್ಲಿ ನೆರವಾದರು. ನಿತ್ಯವೂ ನೆಮ್ಮದಿಯನ್ನು ಅರಸಿ, ಧಾರ್ಮಿಕ ಬೋಧನೆ ಅರಸಿ, ಆಶ್ರಯ ಬಯಸಿ ಬಂದು ಹೋಗುವ ಹತ್ತು ಹಲವು ಜನರಿಗೆ ಜಾತಿ ಮತ ಭೇದವಿಲ್ಲದೆ ಆಧರಿಸಿ ಅನ್ನದಾನವನ್ನು ಮಾಡಿದರು. ಬೇಡಿ ಬಂದವರಿಗೆ ಕೈಯೆತ್ತಿ ನೀಡಿದರು. ಇಷ್ಟರ ವೇಳೆ ಬಡ ನಿರ್ಗತಿಕ ಶೋಷಿತ ಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯವನ್ನು ಆರಂಭಿಸುವ ಬಗ್ಗೆ ಭಾವನೆಗಳು ಉತ್ಕಟವಾಗತೊಡಗಿದವು. ಆದರೆ ಶ್ರೀ ಮಠದ ಆದಾಯವು ಆಚರಣೆಗೆ ತರುವಷ್ಟು ಶಕ್ತವಾಗಿರಲಿಲ್ಲ. ಸಮಾನ ಮನಸ್ಕ ಸೇವಾಸಕ್ತರಿಂದ ದೇಣಿಗೆಯನ್ನು ಕೇಳಿ ಪಡೆಯುವುದಕ್ಕೂ ದಾಕ್ಷಿಣ್ಯ ಪರವಾದ ಗುರುಗಳಿಗೆ ಅಡ್ಡಿಯಾಯಿತು. ಅದೇ ಯೋಚನೆಯಲ್ಲಿ ದಿನ ಕಳೆದ ಸ್ವಾಭಿಮಾನ, ಸರಳವಂತಿಕೆ, ದೈವ ಸಮಾಜ, ಪೂಜಾ ನಿಷ್ಠೆ ಸಾಕಾರಗೊಂಡAತಿದ್ದ ಪರಮಪೂಜ್ಯರು ೧೭.೮.೧೯೯೭ರಲ್ಲಿ ಲಿಂಗೈಕ್ಯರಾದರು.
೧೯೭೯ರಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಪೂಜ್ಯರ ಮಾರ್ಗದರ್ಶನದಲ್ಲಿ ಶ್ರೀ ಮಠದ ಒಳ-ಹೊರಗನ್ನು ತಪಸ್ಸು ಎಂಬAತೆ ಅಧ್ಯಯನ ಮಾಡಿದರು. ಹಾಗೂ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃರ್ತ್ತರಾದರು. ಮುಖ್ಯವಾಗಿ ವಿದ್ಯಾದಾನ ಶ್ರೇಷ್ಠದಾನ ಎಂಬAತೆ ೧೯೯೮ ರಲ್ಲಿ ಶ್ರೀ ಶಾಂತಮಲ್ಲ ಸ್ವಾಮಿ ವಿದ್ಯಾಪೀಠವನ್ನು ಸ್ಥಾಪಿಸಿದರು. ಇಂದು ಎಸ್. ಎಂ.ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್ ಎಂಬ ಹೆಸರಿನಲ್ಲಿ ವಿದ್ಯಾಸಂಸ್ಥೆ ಕಟ್ಟಿ ಗ್ರಾಮಾಂತರ ಮಕ್ಕಳಿಗೆ ಸಿಬಿಎಸ್ಇ ಮಾದರಿಯ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ. ಹಾಗೆಯೇ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆ (ಡಿಎಡ್)ಕೂಡ ಯುವ ಆಕಾಂಕ್ಷಿ ಗಳ ಆಕರ್ಷಣೆಯಾಗಿತ್ತು. ಕಾಲೇಜು ಶಿಕ್ಷಣ ದೊರೆಯುತ್ತಿದೆ. ಸ್ಥಳೀಯ ರಲ್ಲದ ವಿದ್ಯಾರ್ಥಿಗಳಿಗೆ ಆಸರೆಯಾ ಗುವ ಉದ್ದೇಶದಿಂದ ಲಿಂಗರಾಜೇAದ್ರ ಪ್ರಸಾದ ನಿಲಯವು ೨೦೧೫ರಲ್ಲಿ ನಿರ್ಮಾಣಗೊಂಡಿದೆ. ಪರಮಪೂಜ್ಯ ಹಿರಿಯ ಶಾಂತಮಲ್ಲ ಸ್ವಾಮಿಗಳು ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅಭಿಮಾನವುಳ್ಳವ ರಾಗಿದ್ದು, ಗಡಿ ಭಾಗವಾದ ವಿರಾಜಪೇಟೆ ನಗರದಲ್ಲಿ ಬಹಳ ಹಿಂದೆಯೇ ಕರ್ನಾಟಕ ಸಂಘದ ನಿರ್ಮಾಣಕ್ಕೆ ದೇಣಿಗೆ ನೀಡಿದ್ದನ್ನು ನಾವು ಸ್ಮರಿಸಬಹುದಾಗಿದೆ. ಅರಮೇರಿ ಮಠ ದಕ್ಷಿಣ ಕೊಡಗಿನ ಪ್ರಾಚೀನ ಪ್ರಸಿದ್ಧ ಮಠವಾಗಿದ್ದು ಸುಮಾರು ೩೨೫ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನತೆ ಹೊಂದಿದೆ. ಜಾಗೃತ ಕೈಂಕರ್ಯದ ಶ್ರೀ ಅರಮೇರಿ ಮಠದ ಇತಿಹಾಸವು ಬಹಳ ಕುತೂಹಲಕಾರಿ, ಗಮನಾರ್ಹ, ಗಣನೀಯವಾಗಿದೆ.
ಹಾಲೇರಿ ವಂಶದ ಮೂರನೇ ದೊರೆ ಮುದ್ದುರಾಜ ಪ್ರಾಚೀನ ನೆಲೆಯಾದ ಬೆಪ್ಪುನಾಡಿನ ಅರಮೇರಿಗೆ ತನ್ನ ರಾಜ್ಯ ಸಂಚಾರ ಕಾಲದಲ್ಲಿ ಬಂದಾಗ ಅಲ್ಲಿಯ ಅಳಮಂಡ ಮನೆತನದ ಗೌರವಾನ್ವಿತ ವರ್ಚಸ್ವಿ ವ್ಯವಹಾರ ಚತುರೆ ದೊಡ್ಡವ್ವನನ್ನು ಕಂಡು ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದ, ಆಕೆಯ ಸಾಮರ್ಥ್ಯವನ್ನು ಮೆಚ್ಚಿ ಅಳಮಂಡ ಕುಟುಂಬಕ್ಕೆ ಊರು ತಕ್ಕಾಮೆ ಯನ್ನು ನೀಡಿದ ಅರಮನೆಯಲ್ಲಿ ಆನೆಗಳನ್ನು ಇಟ್ಟು ಕಿರು ಅರಮನೆಯನ್ನು ಹೋಲುವ ಕಟ್ಟಡವನ್ನು ಕಟ್ಟಿಸಿದ ಕಾರಣ ಆನೆಬೆಪ್ಪುನಾಡಿನ ಅರಮೇರಿ ಎಂದು ಕರೆಸಿಕೊಳ್ಳುತ್ತಿತ್ತಂತೆ. ಅರಮನೆಕೇರಿಯೇ ಅರಮೇರಿ ಎಂದು ಆಂಬೋಣವಿದೆ. ಅಲ್ಲದೆ ಇಲ್ಲಿ ಜಿನಾಲಾಯದ ಕುರುಹು ಇರುವಲ್ಲಿ ಆರನಾಥನ ಕೇರಿ ಅರಮೆರಿ ಆಗಿರಲುಬಹುದು ಎಂಬ ಮಾತಿದೆ. ಆನೆಗಳನ್ನು ಇಡುವುದು ಮುದ್ದುರಾಜನ ಭೇಟಿ ಇವೆಲ್ಲ ಈ ನೆಲೆಯ ಮಹತ್ವವನ್ನು ಸೂಚಿಸುತ್ತದೆ. ಇದನ್ನು ಅರಮೇರಿ-ಕಳಂಚೇರಿ ಎಂದು ಸಂಯುಕ್ತವಾಗಿ ಕರೆಯಲಾಗಿದೆ. ಅರಮೇರಿ-ಕಳಂಚೇರಿ ಎನ್ನುವಲ್ಲಿ ಕಳಂ-ಕಣ ಮಾಡುವ ರಾಜರ ಖಾಸಗಿ ಕೃಷಿ ಜಮೀನು, ಪನ್ಯಭೂಮಿ ಇದ್ದ ಜಾಗವು ಆಗಿದ್ದ ಸೂಚನೆ ಕಾಣುತ್ತದೆ. ಬೆಪ್ಪುನಾಡು ಮಠ ಎಂದೂ ಈ ಮಠಕ್ಕೆ ಹೆಸರಿದೆ. ಕಳಂಚೇರಿ, ಮಾದಾಪಟ್ಟ್ ಮೂಪಂಡಾಣೆ ಎಂಬ ವಿಂಗಡಣೆಗಳು ಇವೆ. ಕಳಂಚೇರಿ ಕೆಳಕೇರಿಯಲ್ಲಿದ ಕಣದ ಕಾರಣ ಕಳಂಚೇರಿ ಮಠವೆಂದು ಹೆಸರಿಟ್ಟು ಇಡೀ ನಾಡಿಗೆ ಪ್ರಸಿದ್ಧಿಯಾಗಿದೆ. ರಾಜರ ಸೈನ್ಯಕ್ಕೆ ಈ ಪನ್ಯ ಜಮೀನಿನ ಭತ್ತವನ್ನು ಅವಲಕ್ಕಿ ಮಾಡಿ ಒದಗಿಸುವ ನೆಲೆಯೂ ಆಗಿತ್ತು. ಪಡೆಯಾಳುಗಳ ರಾಜ ಮಹತ್ವದ ಅರಮೇರಿ ಕಳಂಚೇರಿಯಲ್ಲಿ ಮಠ ಸ್ಥಾಪನೆ ಸಿರಿ ಬಾಯಿ ದೊಡ್ಡ ವೀರಪ್ಪನ ಕಾಲದಲ್ಲಿ ಆಗಲು ಹಿನ್ನೆಲೆಯ ಐತಿಹಾಸಿಕ ಸಂಗತಿಯೂ ಇದೆ.
ಹಿರಿಯ ಶ್ರೀ ಶಾಂತಮಲ್ಲ ಸ್ವಾಮಿಗಳು ಬದುಕಿದ್ದಾಗಲೇ ಶಿವರಾತ್ರಿ, ಬಸವ ಜಯಂತಿ, ಹುತ್ತರಿ ಹಬ್ಬದಾಚರಣೆ, ಶಿವಾನುಭವ ಗೋಷ್ಠಿ, ದಾಸೋಹ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದವು. ಅವರು ಕೊಡಗನ್ನು ಆಳಿದ ಹಾಲೇರಿ ಅರಸರ ಕುರಿತ ವಿಚಾರಗೋಷ್ಠಿಯನ್ನು ವೀರಾಜಪೇಟೆ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಸಿದ್ದರು. ಈ ಸಂಘದ ಕಟ್ಟಡದ ನಿರ್ಮಾಣಕ್ಕೆ, ಪ್ರಾಥಮಿಕ ಶಾಲೆ, ಟಿಸಿಎಚ್ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಊಟ ವಸತಿ ವ್ಯವಸ್ಥೆಗೆ ದೇಣಿಗೆ ನೀಡಿದರು. ಅಂತರ್ಜಾತಿ ಹಾಗೂ ಅಂತಧರ್ಮೀಯ ವಧೂ-ವರರಿಗೆ ಶಿವದೀಕ್ಷೆ ನೀಡಿ ವಿವಾಹಗಳನ್ನು ನೆರವೇರಿಸಿದರು. ಉಭ-ಶುಭ ಕೇಳಲು ಇವರಲ್ಲಿ ಬರುತ್ತಿದ್ದವರು ಇದ್ದಾರೆ. ಮಠದ ಗುರುಗಳು ಪ್ರಾದೇಶಿಕ ಹಬ್ಬ ಹಾಗೂ ವೈಶಿಷ್ಟ÷್ಯಗಳನ್ನು ಮಾನಿಸಿ ಮಠದ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದು ಕಾಣಬರುತ್ತದೆ. ಮತ್ತಷ್ಟು ಮುಂದುವರಿದು ಇಡೀ ವರ್ಷ ಹೊಂಬೆಳಕು ಚಿಂತನ ಕಾರ್ಯವನ್ನು ಯಶಸ್ವಿಯಾಗಿ ನಡೆಸಿ ಕೊಂಡು ಬಂದಿದೆ. ಕಾರ್ಯಕ್ರಮದ ರೂವಾರಿಗಳಾದ ಶ್ರೀ ಮ.ನಿ.ಪ್ರ. ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿರುವುದರ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ನೆರವಾಗಿದ್ದಾರೆ. ತಮಗೆ ದೊರೆತ ಅನುಭವಗಳನ್ನು ಹೊಳೆದ ಸುಳುಹುಗಳನ್ನು ಧರ್ಮಜ್ಯೋತಿ ಚಿಂತನಗುಚ್ಛದಲ್ಲಿ ಹೆಣೆದು ತಮ್ಮ ಪ್ರತಿಭೆ ತೋರಿದ್ದಾರೆ.
ಶ್ರೀಮಠದ ೩೨೫ನೇ ವರ್ಷದ ಅಸ್ತಿತ್ವದ ಕುರುಹಾಗಿ ತ್ರಿಶತಮಾನೋತ್ಸವ, ಹಿರಿಯ ಲಿಂಗೈಕ್ಯ ಶ್ರೀ. ಮನಿಪ್ರ ಶಾಂತಮಲ್ಲ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಹಾಗೂ ಎರಡನೇ ಲಿಂಗರಾಜೇAದ್ರ ಒಡೆಯನು ಶ್ರೀಮಠಕ್ಕೆ ನೀಡಿದ ಭೂದಾನದ ಸ್ಮರಣೆಗಾಗಿ ಲಿಂಗರಾಜೇAದ್ರ ಪ್ರಸಾದ ನಿಲಯ ಪ್ರಾರಂಭೋತ್ಸವ ಹೀಗೆ ತ್ರಯೋತ್ಸವ ಸಮಾರಂಭ ಮಾಡಿದ್ದಾರೆ. ಶ್ರೀಮಠಕ್ಕೆ ಇದು ಒಂದು ಮೈಲಿಗಲ್ಲಾಗಿದೆ. ಈ ಮೈಲಿಗಲ್ಲನ್ನು ಬರಹದ ಮೂಲಕ ಮಾಧ್ಯಮದಲ್ಲಿ ಸ್ಥಾಪಿಸುವ ಸಲುವಾಗಿ ಶಾಂತಸಿರಿ ಎಂಬ ಸ್ಮರಣ ಸಂಪುಟವನ್ನು ಕೂಡ ಪ್ರಕಟಿಸಿದ್ದಾರೆ. ಅರಮೇರಿ ಕಳಂಚೇರಿ ಮಠವು ಪವಿತ್ರ ಪರಂಪರೆ ಹೊಂದಿ ಧರ್ಮ ಸಂಸ್ಕöÈತಿ ಆದರ್ಶಗಳನ್ನು ಎತ್ತಿ ಹಿಡಿದಿದೆ. ರಾಜ ಮಹಾರಾಜರು ಆಯಾ ಕಾಲಘಟ್ಟಗಳಲ್ಲಿ ಶ್ರೀ ಮಠದ ಮಾರ್ಗದರ್ಶನ ಪಡೆದಿದ್ದನ್ನು ನಾವು ಕಾಣಬಹುದು ಕೊಡಗಿನ ಅರಸು ಮನೆತನದವರು,ಹಲವಾರು ಸಾಮಂತರು ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದನ್ನು ಮರೆಯಲಾಗದು. ಗತಕಾಲದ ಇತಿಹಾಸ ಭವಿಷ್ಯತ್ಗೆ ದಿಕ್ಸೂಚಿ, ಜನಸಮುದಾಯದಲ್ಲಿ ಭಕ್ತಿ, ಜ್ಞಾನ ಅನುಭವ ದಾಸೋಹ, ಕಾಯಕ ಮೊದಲಾದವುಗಳ ಬಗೆಗೆ ಅಭಿರುಚಿ ಆಸಕ್ತಿ ಬೆಳೆಸಿದ್ದನ್ನು ಶ್ರೀ ಮಠದ ಇತಿಹಾಸದಿಂದ ತಿಳಿಯಬಹುದು.
ಪ್ರತಿ ತಿಂಗಳ ಮೊದಲ ಭಾನುವಾರ ನಿಗದಿಪಡಿಸಿದಂತೆ ನಡೆಯುವ ಹೊಂಬೆಳಕು ಕಾರ್ಯಕ್ರಮದ ಪರಿಕಲ್ಪನೆ ಮೂಡಿದ್ದು ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರಲ್ಲಿ. ಇದಕ್ಕೆ ಪುಷ್ಟಿಕೊಟ್ಟು ನೀರೆರೆದು ಹೆಮ್ಮೆರವಾಗಿ ಬೆಳೆಯಲು ಶ್ರಮಿಸಿದವರು ಡಾ.ಕೊಟ್ರಸ್ವಾಮಿ(ಐ.ಎ.ಎಸ್). ಅರಮೇರಿ ಕಳಂಚೇರಿ ಮಠದಲ್ಲಿ ಕಳೆದ ಸುಮಾರು ವರ್ಷಗಳಿಂದ ಮಠಾಧೀಶ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರ ಆಸಕ್ತ ಕೇಳುಗರ ಜ್ಞಾನ ಭಂಡಾರವನ್ನು ಶ್ರೀಮಂತಗೊಳಿಸಿ ಅವರ ಬದುಕಿನಲ್ಲಿ ಹೊಸ ಆಯಾಮಗಳನ್ನು ಮೂಡಿಸುವ ದೃಷ್ಟಿಯಿಂದ ಚಿಂತನ ಗೋಷ್ಠಿಗಳನ್ನು ನಡೆಸಲಾಗಿದೆ. ಕೇವಲ ವೇದಾಂತ, ಆಧ್ಯಾತ್ಮಗಳಲ್ಲದೆ ಬದುಕನ್ನು ಮತ್ತಷ್ಟು ಸ್ವಾದಿಷ್ಟಗೊಳಿಸುವ ಅಪ್ಯಾಯಮಾನವನ್ನಾಗಿಸುವ ಸಾಹಿತ್ಯ, ಕೃಷಿ ಆರೋಗ್ಯ ಪರಿಸರ ಜೀವನ ಶೈಲಿ ಹೀಗೆ ಹಲವು ವಿಜ್ಞಾನ ಹೀಗೆ ಹಲವಾರು ವಿಷಯಗಳ ಬಗ್ಗೆ ಪರಿಣತರನ್ನು ಕರೆಸಿ ಉಪನ್ಯಾಸವನ್ನು ನೀಡಲಾಗಿದೆ. ಆರಂಭದಲ್ಲಿ ಇಂತಹ ಚಿಂತನ ಗೋಷ್ಠಿಗಳನ್ನು ಹವ್ಯಾಸವಾಗಿ ನಡೆಸಲು ಸಾಧ್ಯವೇ ಎಂಬ ಅನುಮಾನ ಗೊಂದಲಗಳು ಮೂಡಿದ್ದರು ಒಂದೊAದು ಮೆಟ್ಟಿಲನ್ನು ಏರುತ್ತಾ ಹೋದಂತೆ ಶ್ರೀ ಮಠದ ಆತ್ಮವಿಶ್ವಾಸವು ನೂರ್ಮಡಿಕೊಳ್ಳುತ್ತಾ ಹೋಯಿತು. ಸಾಧನೆಯು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಉತ್ಸಾಹದಿಂದ ಆಗಮಿಸಿ ಉಪನ್ಯಾಸಗಳನ್ನು ನೀಡಿದವರು ಬಹಳಷ್ಟು ಮಂದಿ ಇದ್ದಾರೆ. ಹೊಂಬೆಳಕಿನ ಕಿರಣ ಎಲ್ಲೆಡೆ ಹರಡುತ್ತಿದೆ. ಇಲ್ಲಿರುವ ವಿಷಯಗಳು ವೈವಿಧ್ಯಮಯವಾಗಿ ಕ್ರೀಡೆ, ಆರೋಗ್ಯ, ಜ್ಯೋತಿಷ್ಯ, ಪರಿಸರ, ಸಮೂಹ ಮಾಧ್ಯಮ ಹೀಗೆ ಮನುಷ್ಯನ ಮನಸ್ಸಿನ ಅಜ್ಞಾನವೆಂಬ ಕತ್ತಲೆಯನ್ನು ದೂರವಾಗಿಸಲು ಶ್ರೀ ಮಠ ಸತತ ಶ್ರಮಿಸುತ್ತಿದ್ದು ಇದರ ಪ್ರಯೋಜನ ಸರ್ವರಿಗೂ ಲಭಿಸಲಿ ಎಂಬುದು ಶ್ರೀಗಳ ಆಶಯವಾಗಿದೆ. ಇಂದಿನ ಶ್ರೀ ಮಠದ ಪಟ್ಟಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಜನಾನುರಾಗಿಯಾಗಿ ಕ್ರಿಯಾಶೀಲರಾಗಿ ಮತ್ತು ರಚನಾತ್ಮಕ ಕಾರ್ಯಗಳ ರೂವಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘಟನಾ ಕೌಶಲದಿಂದ ಶ್ರೀಮಠವನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತ ಭಕ್ತರಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಬೆಳೆಸಿ ಆರ್ಥಿಕ, ಅಭಿವೃದ್ದಿಯ ಜೊತೆಜೊತೆಗೆ ಸಾಮಾಜಿಕ ಜಾಗೃತಿಯಿಂದ ಬಾಳುವುದಕ್ಕೆ ಅಗತ್ಯವಾದ ದಾರಿಯನ್ನು ತೋರಿಸುತ್ತಿದ್ದಾರೆ. ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವುದರಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದ ರನ್ನು ಹೋಲುವ ಒಬ್ಬ ಪ್ರತಿಭಾವಂತರು, ತೇಜಸ್ವಿ ಗುರು ಕೊಡಗಿನ ತೀರ ಒಳಪ್ರದೇಶದಲ್ಲಿಯೂ ಹೇಗೆ ಸಾಂಸ್ಕೃತಿಕ ಸಾಮಾಜಿಕ ಪರಿವರ್ತನೆಗಳನ್ನು ತರಬಲ್ಲರು ಎಂಬುದಕ್ಕೆ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಸೋದಾಹರಣವಾಗಿದ್ದಾರೆ. ಒಟ್ಟಾರೆ ಕೊಡಗಿನ ಶೈಕ್ಷಣಿಕ, ಸಾಮಾಜಿಕ ಆದ್ಯಾತ್ಮಿಕ ಬದುಕಿಗೆ ವೀರಶೈವ ಮಠಗಳು ಸ್ಪಂದಿಸಿ ಪ್ರಾದೇಶಿಕ ವೈಶಿಷ್ಟö್ಯವನ್ನು ತಾವೂ ಕಾಪಿಟ್ಟು ಜನಪ್ರೀತಿಗೆ ಭಾಗಿಗಳಾಗಿವೆ ಎನ್ನಬಹುದು.
-ರಜಿತ ಕಾರ್ಯಪ್ಪ, ವೀರಾಜಪೇಟೆ.