ಮಡಿಕೇರಿ, ಮಾ. ೧೧ : ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರಕಾರ ಮಾಡಿರುವ ಉತ್ತಮ ಕೆಲಸ ಕಾರ್ಯಗಳಿಂದಾಗಿ ಈ ಬಾರಿಯೂ ಜನರು ಬೆಂಬಲ ನೀಡಲಿದ್ದು, ಜನಾಶೀರ್ವಾದದಿಂದ ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಾನಂದ ಗೌಡ ಅವರು; ಈಗಾಗಲೇ ಚುನಾವಣಾ ರಂಗ ಎದುರಾಗಿದ್ದು, ಬಿಜೆಪಿ ತಯಾರಿಯೊಂದಿಗೆ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಹೇಳಿರುವಂತೆ ಅವಕಾಶ ಸಿಕ್ಕಾಗ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂಬAತೆ ಯಾವ ರೀತಿ ಸದ್ವಿನಿಯೋಗ ಮಾಡಲಾಗಿದೆ, ಸೃಜನಶೀಲ ಆಭಿವೃದ್ಧಿಯೊಂದಿಗೆ ಹೇಗೆ ಆಡಳಿತ ಮಾಡಿದ್ದೇವೆ ಎಂಬುದನ್ನು ತುಲನೆ ಮಾಡಿಕೊಂಡು ಮತದಾನ ಮಾಡಬೇಕಿದೆ. ಕೇಂದ್ರ, ರಾಜ್ಯದಲ್ಲಿ ಮಾಡಿರುವ ಕೆಲಸ ಕಾರ್ಯಗಳನ್ನು ಜನರ ಮುಂದಿಡುವ ಉದ್ದೇಶದೊಂದಿಗೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಜನರಿಂದ ಅದ್ಭುತ ಬೆಂಬಲ ವ್ಯಕ್ತವಾಗುತ್ತಿದೆ. ಮಾಡಿರುವ ಕೆಲಸಗಳ ಆಧಾರದಲ್ಲಿ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು. ನಿನ್ನೆ ಗೋಣಿಕೊಪ್ಪದಲ್ಲಿ ಸೇರಿದ್ದ ಜನತೆ ಜಿಲ್ಲೆಯಲ್ಲಿ ಬಿಜೆಪಿಗೆ ಎದುರಾಳಿಗಳೇ ಇಲ್ಲವೆಂಬದನ್ನು ಸಾಬೀತುಪಡಿಸಿದ್ದಾರೆ. ಜನಪರ ಕೆಲಸಗಳನ್ನು ಮಾಡಿದರೆ ಜನ ನಮ್ಮೊಂದಿಗೆ ಇರುತ್ತಾರೆ ಎಂದು ಹೇಳಿದರು.

ಮಾಜಿ ಸಚಿವ ಈಶ್ವರಪ್ಪ ಮಾತನಾಡಿ; ರಾಜ್ಯದಲ್ಲಿ ಇದುವರೆಗೆ ಬಿಜೆಪಿ ಬಹುಮತ ಪಡೆದು ಅಧಿಕಾರ ಮಾಡಿಲ್ಲ, ಆದರೆ ಈ ಬಾರಿ ಪೂರ್ಣ ಬಹುಮತ ಪಡೆಯುವಷ್ಟರ ಮಟ್ಟಿಗೆ ಸಂಘಟನೆ ಬೆಳೆದಿದೆ. ಪ್ರತಿ ಬೂತ್, ಪೇಜ್ ಮಟ್ಟದಲ್ಲಿ ದೊಡ್ಡದಾಗಿ ಬೆಳೆದಿದೆ ಎಂದರು. ನೇತೃತ್ವ, ಸಂಘಟನಾ ಶಕ್ತಿ, ಅಭಿವೃದ್ಧಿ ಹಾಗೂ ಸಂಸ್ಕೃತಿಯ ರಕ್ಷಣೆ ಈ ನಾಲ್ಕು ಅಂಶಗಳ ಆಧಾರದಲ್ಲಿ ಬಿಜೆಪಿ ಜನರ ಬಳಿಗೆ ತೆರಳುತ್ತಿದೆ. ೧೩ ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು, ಮಹಿಳೆಯರನ್ನು ತಾತ್ಸಾರ ಮಾಡಿದ್ದಾರೆ. ಆದರೆ ಬಿಜೆಪಿ ಮಾಡಿಲ್ಲ, ಹೆಚ್ಚಿನ ಬೆಂಬಲ ನೀಡಿದೆ. ಜನ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎಂದರು.

ಕ್ಷೇತ್ರ ಇಲ್ಲದ ಸಿದ್ದರಾಮಯ್ಯ

ಇತಿಹಾಸದಲ್ಲಿ ಸಿದ್ದರಾಮಯ್ಯ ಅವರಂತಹ ವಿರೋಧಾಭಾಸಕರ ವ್ಯಕ್ತಿಯನ್ನು ನಾನು ನೋಡಿಲ್ಲ. ಪುರೋಹಿತಶಾಹಿಗಳು, ಮನುವಾದಿ ಗಳು ಅಂತ ಜರಿಯುವವರು ದೇವಸ್ಥಾನ, ಮಠಗಳಿಗೆ ಹೋಗುತ್ತಿಲ್ಲವೇ? ಹಾಗಿದ್ದವರು ತಾವು ಒಂದು ಸಮುದಾಯದ ಪರ, ಗೋವುಗಳನ್ನು ತಿನ್ನುತ್ತೇವೆ, ಮತಾಂತರಕ್ಕೆ ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಲಿ ಎಂದು ಈಶ್ವರಪ್ಪ ಸವಾಲು ಹಾಕಿದರು. ನಾಟಕೀಯ ಬುಡುಬುಡಕೆ ಯಿಂದಾಗಿ ಚಾಮುಂಡೇಶ್ವರಿಯಲ್ಲಿ ಸೋಲನುಭವಿಸಿದ್ದಾರೆ. ಇದೀಗ ಕ್ಷೇತ್ರ ಹುಡುಕಾಟ ಮಾಡುತ್ತಿದ್ದು, ಕ್ಷೇತ್ರ ಇಲ್ಲದ ಸಿದ್ದರಾಮಯ್ಯ ಆಗಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಾತಿವಾದಿ ಗಳಾಗಿದ್ದು, ಯಾವದೇ ಕಾರಣಕ್ಕೂ ರಾಜ್ಯದ ಜನ ಕ್ಷಮಿಸುವದಿಲ್ಲ ಎಂದರು.

ದಶಪಥ ಯೋಜನೆ ದೇವೇಗೌಡ ರದ್ದೆಂದು ಹೇಳಿಕೊಳ್ಳುತ್ತಿರುವದಕ್ಕೆ ಪ್ರತಿಕ್ರಿಯಿಸಿದ ಅವರು, ‘ಯಾರೋ ಹುಟ್ಟಿಸಿದ ಮಗು ನಮ್ಮದು’ ಎಂದು ಹೇಳಿಕೊಳ್ಳುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರುಗಳು ಒಂದು ರೂಪಾಯಿ ಕೊಟ್ಟಿದ್ದರೆ ಅವರು ಹೇಳಿದ ಹಾಗೆ ನಾವು ಕೇಳುತ್ತೇವೆ. ಇದು ಪ್ರಧಾನಿ ನರೆಂದ್ರ ಮೋದಿ ಕೊಟ್ಟಿದ್ದು ಎಂದು ತಿರುಗೇಟು ನೀಡಿದರು.