ಶನಿವಾರಸಂತೆ, ಮಾ. ೧೨: ಕೊಡಗು ಜಿಲ್ಲಾ ಆಯುಷ್ ಇಲಾಖೆ ಮತ್ತು ಸೋಮವಾರಪೇಟೆ ಆಯುಷ್ ವಿಭಾಗದ ವತಿಯಿಂದ ಇಲಾಖೆಯ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದ ಅಂಗವಾಗಿ ಸಮೀಪದ ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಕುರಿತು ಮಾಹಿತಿ ಮತ್ತು ಸಾಮೂಹಿಕ ಯೋಗಭ್ಯಾಸ ಕಾರ್ಯಕ್ರಮ ಹಾಗೂ ವಿದ್ಯಾರ್ಥಿನಿಯರಿಗೆ ಹದಿಹರೆಯದ ಸಮಸ್ಯೆ ಮತ್ತು ಪರಿಹಾರ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಯೋಗದ ಮಹತ್ವ ಕುರಿತು ಸೋಮವಾರಪೇಟೆ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಿ.ಜಿ. ಅರಣ್ ಮಾಹಿತಿ ನೀಡಿ, ಯೋಗ ಅಭ್ಯಾಸದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ, ಯೋಗ ಮಾಡುವುದರಿಂದ ಮಾನಸಿಕ ಒತ್ತಡವು ದೂರವಾಗುತ್ತದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಯೋಗಭ್ಯಾಸ ಮಾಡುವ ಮೂಲಕ ಕ್ರಿಯಾಶೀಲರಾಗಿ ತರಗತಿಗೆ ಬಂದು ಪಠ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಸರಕಾರ ಮತ್ತು ಆಯುಷ್ ಇಲಾಖೆ ಮೂಲಕ ಆಯುಷ್ ಸೇವಾ ಗ್ರಾಮ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಯೋಗಭ್ಯಾಸ, ಧ್ಯಾನದ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.
ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆ ಮತ್ತು ಪರಿಹಾರ ಕುರಿತು ಸೋಮವಾರಪೇಟೆ ಆಯುಷ್ ಆಸ್ಪತ್ರೆಯ ವೈದ್ಯೆ ಡಾ. ಕೆ.ಎಸ್. ಶ್ವೇತ ಮಾಹಿತಿ ನೀಡಿ, ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿರುತ್ತವೆ. ಹದಿ ಹರೆಯದಲ್ಲಿ ದೈಹಿಕವಾದ ಬದಲಾವಣೆಗಳಾಗುತ್ತವೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮ್ಮ ತಾಯಿಯೊಂದಿಗೆ ಸಮಸ್ಯೆಗಳನ್ನು ಹೇಳಿಕೊಳ್ಳುವಂತೆ ಸಲಹೆ ನೀಡಿದ ಅವರು ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳನ್ನು ಪ್ರತಿ ದಿನ ಯೋಗಭ್ಯಾಸ, ವ್ಯಾಯಾಮ ಮಾಡುವುದರ ಮೂಲಕ ನಿವಾರಣೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಕೆ.ಎನ್. ಭಾರತಿ, ದೈಹಿಕ ಶಿಕ್ಷಣ ಶಿಕ್ಷಕ ವಿ. ಅಲೋಕ್, ಶಿಕ್ಷಕಿ ಪೂರ್ಣಿಮ ಆಯೂಷ್ ಇಲಾಖೆ ಸಿಬ್ಬಂದಿ ರವಿಕುಮಾರ್, ಚರಣ್, ಆಯುಷ್ ಯೋಗ ಶಿಕ್ಷಕ ಕೌಶಿಕ್ ಬೆಂಬಳೂರು, ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರು ಹಾಜರಿದ್ದರು.