ಮಡಿಕೇರಿ, ಮಾ. ೧೧: ಭಾರತ ಸೇವಾದಳದ ಕೊಡಗು ಜಿಲ್ಲಾ ಅಜೀವ ಸದಸ್ಯರ ಕಾರ್ಯಾಗಾರ ನಗರದಲ್ಲಿನ ಸೇವಾದಳದ ಕಚೇರಿಯಲ್ಲಿ ನಡೆಯಿತು. ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಪಿ.ಸುಬ್ರಮಣ್ಯ ಉಪಾದ್ಯಾಯ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣವನ್ನು ಕೇಂದ್ರ ಕಾರ್ಯಕಾರಿ ಸದಸ್ಯ ಎ.ಕೆ. ಪಾಲಾಕ್ಷ ಅವರು ಮಾಡಿದರು.
ಸೇವಾದಳದ ಜಿಲ್ಲಾ ಸಮಿತಿಯ ಖಜಾಂಚಿ ಹಾಗೂ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ಎಂ. ರವಿ ಕಾಳಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಕಾರ್ಯದರ್ಶಿಗಳಾದ ಮೋಂತಿ ಗಣೇಶ್, ರವಿ ಕಾಳಪ್ಪ ಅವರುಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸೇವಾದಳದ ಕುರಿತು ಮಾಹಿತಿ ಇತ್ತರು.
ರಾಜ್ಯ ಉಪ ದಳಪತಿ ಕಾಶೀನಾಥ್ ಹಂದ್ರಾಳ ಅವರು ಸೇವಾದಳ ನಡೆದು ಬಂದ ದಾರಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೇವಾದಳದ ಪಾತ್ರ, ಪ್ರಾಣಾಯಾಮ ಬಗ್ಗೆ ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು, ಸದಸ್ಯರು ಜೊತೆಗೆ ಜಿ.ಎಂ.ಪಿ ಮತ್ತು ಸ.ಪ್ರೌಢಶಾಲಾ ಸೇವಾದಳದ ವಿದ್ಯಾರ್ಥಿಗಳು ಭಾಗವಹಿಸಿದ್ದರು.