ಮಡಿಕೇರಿ, ಮಾ. ೧೧: ಪೊನ್ನಂಪೇಟೆ ತಾಲೂಕು ಉದ್ಘಾಟನೆಗೊಂಡು ೨ ವರ್ಷಗಳು ಕಳೆದರೂ, ಸಂಪೂರ್ಣವಾಗಿ ಕಾರ್ಯಾಚರಿಸದೆ ಈ ಭಾಗದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ತಿಂಗಳೊಳಗೆ ಈ ಸಮಸ್ಯೆ ಬಗೆಹರಿಸುವಂತೆ ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ ಅವರಿಗೂ ವೇದಿಕೆಯ ಸದಸ್ಯರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸರಕಾರದ ಪ್ರತಿಯೊಂದು ಕೆಲಸಕ್ಕೂ ಮೂಲೆ ಮೂಲೆಯಿಂದ ಜನರು ದೂರದ ವೀರಾಜಪೇಟೆ ತಾಲೂಕು ಕಚೇರಿಗೆ ಈಗಲೂ ಅಲೆದಾಡುತ್ತಾ ಅಲ್ಲೂ ಸಹ ಕೆಲಸ ಕಾರ್ಯಗಳು ಆಗದೆ ಹಲವಾರು ಬಾರಿ ಆ ಕಚೇರಿಗೆ ಅಲೆದಾಡಬೇಕಾದ ಕಷ್ಟದ ಪರಿಸ್ಥಿತಿ ಒದಗಿ ಬಂದು ಈ ಭಾಗದ ಜನರ ಗೋಳಾಟಕ್ಕೆ ಮಿತಿ ಇಲ್ಲದಾಗಿದೆ.
ಕೊಡಗಿನಲ್ಲಿ ಹೊಸ ಪೊನ್ನಂಪೇಟೆ ತಾಲೂಕು, ೨೯.೧೧.೨೦೨೦ರಲ್ಲಿ ಉದ್ಘಾಟನೆಯಾಗಿ, ಈಗ ೨ ವರ್ಷದ ಮೇಲಾದರೂ, ಕಾರ್ಯಾಚರಣೆಯಾಗದಿರುವುದು ಈ ಭಾಗದ ಜನರಿಗೆ ಅದರಲ್ಲೂ ಬಡ ಜನರು, ಅಬಲೆಯರು, ಅಂಗವಿಕಲರು, ವಯೋವೃದ್ಧರು, ಕಾರ್ಮಿಕ ವರ್ಗದವರು ಇತ್ಯಾದಿ ನಾಗರಿಕರಿಗೆ ಕಷ್ಟ ನಷ್ಟ ಮತ್ತು ಬೇಸರವನ್ನುಂಟುಮಾಡಿದೆ.
ಏಪ್ರಿಲ್ ೧-೨೦೨೩ರಿಂದ ಈ ಹೊಸ ಪೊನ್ನಂಪೇಟೆ ತಾಲೂಕು ಸರ್ವ ರೀತಿಯಲ್ಲಿ ಕಾರ್ಯಾಚರಣೆಯಾಗಲು ಕ್ರಮ ವಹಿಸುವಂತೆ ವೇದಿಕೆಯ ಸ್ಥಾಪಕ ಜೀವಾವಧಿ ಅಧ್ಯಕ್ಷ ಕಾಟಿಮಾಡ ಎ. ಜಿಮ್ಮಿ ಅಣ್ಣಯ್ಯ, ಅಧ್ಯಕ್ಷ ಕೊಟ್ಟುಕತ್ತಿರ ಪಿ. ಸೋಮಣ್ಣ, ಕಾರ್ಯದರ್ಶಿ ಚೇಂದಿರ ಎಮ್. ಬೋಪಣ್ಣ ಅವರುಗಳು ಮನವಿ ಮಾಡಿದ್ದಾರೆ.