ಸುಂಟಿಕೊಪ್ಪ, ಮಾ. ೧೧: ಪುರುಷರಂತೆ ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಿದರೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಪಡೆಯಲು ಸಾಧ್ಯವಾಗಲಿದೆ ಎಂದು ಜೆ.ಸಿ.ಐ. ಸಂಸ್ಥೆಯ ವಲಯ ಅಧ್ಯಕ್ಷೆ ತುಮಕೂರಿನ ಯಶಸ್ವಿನಿ ಅಭಿಪ್ರಾಯಪಟ್ಟರು.

ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರು ಸಮಾಜದಲ್ಲಿ ಸಮಾನತೆ, ಪ್ರೀತಿ, ಗೌರವವನ್ನು ಮಾತ್ರ ಬಯಸುತ್ತಾರೆಯೇ ವಿನಃ ಬೇರೆ ದುರಾಸೆ ಪಡುವುದಿಲ್ಲ. ಅಂತಹ ಸಾಮರ್ಥ್ಯ ಮಹಿಳೆಯರಲ್ಲಿದೆ. ಏನಾದರೂ ಸಾಧನೆ ಮಾಡಬೇಕಾದರೆ ಪುರುಷರು ಅಡ್ಡಿಪಡಿಸದೆ ಸಹಕಾರ ಮತ್ತು ಪ್ರೋತ್ಸಾಹ ನೀಡಿದರೆ ಮಹಿಳೆಯರ ಗೌರವ, ಸ್ಥಾನಮಾನ ಮತ್ತು ಸಾಧನೆಗಳು ಉತ್ತುಂಗ ಶಿಖರ ಮುಟ್ಟಲಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯಶಸ್ವಿನಿ (ಸಮಾಜ ಸೇವೆ), ಆರತಿ ಸೋಮಯ್ಯ (ಸ್ವಸ್ಥ ಸಂಸ್ಥೆಯ ವಿಶೇಷಚೇತನ ಶಾಲೆಯ ನಿರ್ದೇಶಕಿ), ಶ್ರೀದೇವಿ (ಚುಟುಕು ಕವಿ), ರೂಪಾ ರಮೇಶ್ (ಅನಾಥರಿಗೆ ಆಶ್ರಯ) ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಸತೀಶ್ ಪೂಜಾರಿ, ನಿಯೋಜಿತ ಅಧ್ಯಕ್ಷ ಜಿ.ಟಿ. ಪ್ರೇಮಕುಮಾರ್, ವಲಯ ಉಪಾಧ್ಯಕ್ಷ ನೆಲ್ಸನ್, ಪೂರ್ವ ವಲಯ ಅಧಿಕಾರಿಗಳಾದ ದೇವಿಪ್ರಸಾದ್ ಕಾಯಾರ್ ಮಾರ್, ಡೆನಿಸ್ ಡಿಸೋಜ, ಹರೀಶ್, ವೆಂಕಪ್ಪ ಕೋಟ್ತಾನ್, ಅರುಣ್ ಕುಮಾರ್, ಮನು ಅಚ್ಚಮಯ್ಯ, ಸದಾಶಿವ ರೈ, ಪ್ರೇಮಲತ ರೈ, ಫೆಲ್ಸಿ, ರಮೇಶ್, ನಿರಂಜನ್, ಪ್ರೀತಂ ಪ್ರಭಾಕರ್, ಮುರುಗೇಶ್ ಮಾಯಾ ಇತರರು ಇದ್ದರು.