ಮಡಿಕೇರಿ, ಮಾ. ೯: ಬಿಜೆಪಿಯ ಎಲ್ಲ ಶಾಸಕರು ಮತ್ತು ಸಚಿವರ ಮನೆ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಯಲಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಸಂಬAಧಿಸಿದ ತನಿಖಾ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರು ಆಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷ ಅವರ ಮಗ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್ ಅವರು ಗುತ್ತಿಗೆದಾರರೊಬ್ಬರಿಂದ ೪೦ ಲಕ್ಷ ರೂ.ಗಳನ್ನು ಲಂಚವಾಗಿ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಜೊತೆಗೆ ದಾಳಿ ನಡೆದಾಗ ೨ ಕೋಟಿಗೂ ಅಧಿಕ ಅಕ್ರಮ ಹಣದ ಕಂತೆಗಳು ಸಿಕ್ಕಿವೆ.
ಈ ಪ್ರಕರಣ ಬಿಜೆಪಿ ಸರ್ಕಾರದ ೪೦% ಕಮಿಷನ್ ಹಗರಣವನ್ನು ಸಾಕ್ಷೀಕರಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಎಲ್ಲ ಶಾಸಕರು ಹಾಗೂ ಸಚಿವರ ಮನೆ, ಕಚೇರಿ, ಸಂಬAಧಿಕರು, ಅವಲಂಬಿತರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸುವುದು ಸೂಕ್ತವಾಗಿದೆ ಎಂದು ತೆನ್ನಿರ ಮೈನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.