ಸೋಮವಾರಪೇಟೆ, ಮಾ. ೯: ಪಟ್ಟಣದ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ೨೦೨೩ನೇ ಸಾಲಿನ ಜಾತ್ರೋತ್ಸವವು ತಾ.೧೨ ರಿಂದ ೧೪ರವರೆಗೆ ಮೂರು ದಿನಗಳ ಕಾಲ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ತಿಳಿಸಿದ್ದಾರೆ.

ತಾ. ೧೨ ರಂದು ಬೆಳಗ್ಗೆ ೪.೩೦ಕ್ಕೆ ಗಣಪತಿಹೋಮದೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ೫.೩೦ಕ್ಕೆ ಕೇರಳದ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಅವರ ಪೌರೋಹಿತ್ವದಲ್ಲಿ ಆಶ್ಲೇಷ ಪೂಜೆ ನಡೆಯಲಿದೆ. ಸಂಜೆ ೭ ಗಂಟೆಗೆ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಅನ್ನದಾನ ಮಂಟಪವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್ ವಹಿಸಲಿದ್ದು, ಅತಿಥಿಗಳಾಗಿ ಚೌಡ್ಲು ಗ್ರಾಪಂ ಅಧ್ಯಕ್ಷ ಪಿ.ಎಂ.ಗಣಪತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಪಾಲ್ಗೊಳ್ಳಲಿದ್ದಾರೆ.

ತಾ. ೧೩ರಂದು ಮಧ್ಯಾಹ್ನ ೧೨.೩೦ಕ್ಕೆ ಉತ್ಸವ ಆರಂಭವಾಗಲಿದೆ. ಸಂಜೆ ೪.೩೦ಕ್ಕೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಲಶ ಮೆರವಣಿಗೆ ನಡೆಯಲಿದೆ. ಸಂಜೆ ೬.೩೦ಕ್ಕೆ ವಿಷ್ಣುಮೂರ್ತಿ ದೇವರ ವೆಳ್ಳಾಟಂ, ೭ ಗಂಟೆಗೆ ಕರಿಂಗುಟ್ಟಿ ದೇವರ ವೆಳ್ಳಾಟಂ, ೭,೩೦ಕ್ಕೆ ಕಂಡಕರ್ಣ ದೇವರ ವೆಳ್ಳಾಟಂ, ರಾತ್ರಿ ೮.೩೦ ಕ್ಕೆ ಭಗವತಿ ದೇವಿಯ ವೆಳ್ಳಾಟಂ, ೯.೩೦ಕ್ಕೆ ರಕ್ತ ಚಾಮುಂಡಿ ದೇವಿಯ ವೆಳ್ಳಾಟಂ, ರಾತ್ರಿ ೧೦.೩೦ಕ್ಕೆ ಪೊಟ್ಟನ್ ದೇವರ ವೆಳ್ಳಾಟಂ ನಡೆಯಲಿದ್ದು, ನಂತರ ರಾತ್ರಿ ೧೧.೩೦ಕ್ಕೆ ದೇವರ ಕಳಿಕ್ಕಾಪಾಟ್ ನಡೆಯಲಿದೆ.

ರಾತ್ರಿ ೭.೩೦ ಗಂಟೆಯಿAದ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ. ನಂತರ ಆಕರ್ಷಕ ಪಟಾಕಿ ಮತ್ತು ಸಿಡಿಮದ್ದುಗಳ ಪ್ರದರ್ಶನ ಜರುಗಲಿದೆ. ತಾ. ೧೪ ರಂದು ಜಾತ್ರೋತ್ಸವದ ಕೊನೆಯ ದಿನ ಬೆಳಗಿನ ಜಾವ ೧ ಗಂಟೆಗೆ ವಿವಿಧ ಕೋಲ ನಡೆಯಲಿದೆ. ಅಪರಾಹ್ನ ೩.೦೦ ಗಂಟೆಗೆ ಕೋಲಗಳ ಮುಕ್ತಾಯ ಕಾರ್ಯಕ್ರಮ ಜರುಗಲಿದೆ.